ನವದೆಹಲಿ :2025-26 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಹೊಸ ತೆರಿಗೆ ಪದ್ಧತಿಯು 4 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಆದಾಯದ ಸ್ಲಾಬ್‌ನ ಅಡಿಯಲ್ಲಿ ಬರುವ ಸುಮಾರು 5.65 ಕೋಟಿ ತೆರಿಗೆದಾರರಿಗೆ ಪ್ರಯೋಜನ ನೀಡುವ ನಿರೀಕ್ಷೆಯಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವರದಿಯ ಪ್ರಕಾರ, ತೆರಿಗೆ ಪರಿಷ್ಕರಣೆಯಿಂದಾಗಿ 8 ಲಕ್ಷದಿಂದ 12 ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸುವವರು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಇದರಿಂದ ಸುಮಾರು 1 ಲಕ್ಷ ಕೋಟಿ ರೂಪಾಯಿ ಸರ್ಕಾರಕ್ಕೆ ಕಡಿತವಾಗಲಿದೆ ಎಂದು ಹೇಳಿದೆ.
ತೆರಿಗೆ ಉಳಿತಾಯದಿಂದ ಜನರ ಬಳಿ ಹೆಚ್ಚಿನ ಹಣ ಲಭ್ಯವಾಗಿ, ಅದು ಬಳಕೆಯಲ್ಲಿ ಹೆಚ್ಚಾಗಲಿದೆ ಎಂದು ಎಸ್ಬಿಐ ವರದಿಯು ಅಂದಾಜಿಸಿದೆ. ತೆರಿಗೆ ಉಳಿತಾಯ ಆದಾಯದ ಬಳಕೆಯಿಂದ 3.3 ಲಕ್ಷ ಕೋಟಿ ರೂಪಾಯಿ ಕನಿಷ್ಠ ಬಳಕೆ ಪ್ರವೃತ್ತಿ (ಎಂಪಿಸಿ) ಬೆಳೆಯಲಿದೆ ಎಂದು ವರದಿಯು ಭವಿಷ್ಯ ನುಡಿದಿದೆ.
ಈ ವೆಚ್ಚ ಹೆಚ್ಚಳವು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಇದು ಹೆಚ್ಚು ಕ್ರಿಯಾತ್ಮಕ ಮತ್ತು ಸುಸ್ಥಿರ ಆರ್ಥಿಕತೆಗೆ ಕೊಡುಗೆ ನೀಡುತ್ತದೆ. ಹಣದ ಹೆಚ್ಚಿನ ಬಳಕೆಯಿಂದ ವಿವಿಧ ವಲಯಗಳಲ್ಲಿ ಬೇಡಿಕೆಯನ್ನೂ ಹೆಚ್ಚಿಸುತ್ತದೆ. ಇದು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
ತೆರಿಗೆ ರಿಟರ್ನ್ ಅವಧಿಯೂ ವಿಸ್ತರಣೆ :ತೆರಿಗೆ ಕೊಡುಗೆಯ ಜೊತೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಪ್ರಕ್ರಿಯೆಯಲ್ಲೂ ಬದಲಾವಣೆ ತರಲಾಗಿದೆ. ನವೀಕರಿಸಿದ ಆದಾಯ ತೆರಿಗೆ ರಿಟರ್ನ್‌ಗಳನ್ನು (ಐಟಿಆರ್-ಯು) ಸಲ್ಲಿಸುವ ಅವಧಿಯನ್ನು ಸರ್ಕಾರವು 24 ತಿಂಗಳುಗಳಿಂದ 48 ತಿಂಗಳಿಗೆ ವಿಸ್ತರಿಸಿದೆ. ತೆರಿಗೆದಾರರು ತಮ್ಮ ಆದಾಯ ವಿವರಗಳನ್ನು ಸ್ವಯಂಪ್ರೇರಣೆಯಿಂದ ನವೀಕರಿಸಲು ಮತ್ತು ಯಾವುದೇ ಹೆಚ್ಚುವರಿ ತೆರಿಗೆಯನ್ನು ಪಾವತಿಸಲು ಹೆಚ್ಚಿನ ಸಮಯ ನೀಡಲಾಗಿದೆ.