ಹೈದರಾಬಾದ್: ದುಬಾರಿ ದುನಿಯಾದ ಈ ಸಂದರ್ಭದಲ್ಲಿ ಎಷ್ಟು ಹಣವಿದ್ದರೂ ಕಡಿಮೆ ಎಂಬಂತಾಗಿದೆ. ಹೀಗಾಗಿ ಪ್ರತಿಯೊಬ್ಬರು ಭವಿಷ್ಯದ ಆರ್ಥಿಕ ಅಗತ್ಯಗಳಿಗಾಗಿ ಉಳಿತಾಯದ ಮಂತ್ರವನ್ನು ಅನುಸರಿಸಬೇಕಾದ ಅನಿವಾರ್ಯತೆ ಕೂಡಾ ಇದೆ. ಮಾಸಿಕ ಸಂಬಳ ಪಡೆಯುವವರು, ದಿನಗೂಲಿ ಅಥವಾ ವ್ಯಾಪಾರಿಗಳು ಈಗೀಗ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗೆ ಭವಿಷ್ಯದಲ್ಲಿ ಚನ್ನಾಗಿರಬೇಕು ಎಂದು ಹೂಡಿಕೆ ಮಾಡುವವರಿಗಾಗಿ ಹಲವು ಹೊಸ ಹೊಸ ಯೋಜನೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಪ್ರತಿ ತಿಂಗಳು ಹೂಡಿಕೆ ಮಾಡುವುದರಿಂದ. ದೀರ್ಘಾವಧಿಯಲ್ಲಿ ಉತ್ತಮ ಲಾಭವನ್ನು ಒದಗಿಸುವ ಹಲವು ಯೋಜನೆಗಳು ನಿಮ್ಮ ಮುಂದೆ ಇವೆ. ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಎಲ್ ಐಸಿ ಇಂತಹವರಿಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತೆ. ಇತ್ತೀಚೆಗೆ, ಎಲ್ಐಸಿ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಅದುವೆ LIC ಕೋಟ್ಯಧಿಪತಿ ಲೈಫ್ ಬೆನಿಫಿಟ್ ಸ್ಕೀಮ್ ಆಗಿದೆ. ಈ ಯೋಜನೆಯಲ್ಲಿ ನೀವು ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಆದಾಯವನ್ನು ಪಡೆಯಬಹುದು. ನೀವು ಈ ಯೋಜನೆಗೆ ಸೇರಿದರೆ 1 ಕೋಟಿ ರೂಪಾಯಿಗಳವರೆಗೆ ಬೆನಫಿಟ್ ಪಡೆಯಬಹುದು.
ಈ LIC ಪಾಲಿಸಿಯ ವಿವರಗಳನ್ನು ನೋಡುವುದಾದರೆ, ಎಲ್ಐಸಿ ಕರೋಡ್ಪತಿ ಲೈಫ್ ಬೆನಿಫಿಟ್ ಪಾಲಿಸಿಯಲ್ಲಿ ದಿನಕ್ಕೆ 500 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇದನ್ನು 16 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ 16 ವರ್ಷಕ್ಕೆ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಕೋಟಿ ರೂಪಾಯಿ ರಿಟರ್ನ್ ಆಗಿ ಸಿಗುತ್ತದೆ. ಎಲ್ಐಸಿ ತಂದಿರುವ ಈ ಪಾಲಿಸಿಯ ಗರಿಷ್ಠ ಅವಧಿ 25 ವರ್ಷಗಳು.