ಟೆಹರಾನ್, ಇರಾನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗುವ ಫಲಿತಾಂಶಗಳು ಬರುತ್ತಿವೆ. ಹಲವು ಸವಾಲುಗಳ ನಡುವೆ ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಅಂಚಿನಲ್ಲಿದ್ದಾರೆ. ಈ ನಡುವೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳಲ್ಲಿ ಸಿಲುಕಿರುವ ಟೆಹ್ರಾನ್‌ಗೆ ಹೊಸ ಸವಾಲುಗಳು ಎದುರಾಗಿವೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆ ಇರಾನ್‌ನ ಕರೆನ್ಸಿ ಬುಧವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ರಿಯಾಲ್ ಡಾಲರ್‌ಗೆ 703,000 ರಿಯಾಲ್‌ಗಳಲ್ಲಿ ವಹಿವಾಟು ನಡೆಸುತ್ತಿದೆ ಎಂದು ಟೆಹ್ರಾನ್‌ನ ವ್ಯಾಪಾರಿಗಳು ತಿಳಿಸಿದ್ದಾರೆ.ಈ ದರ ಇನ್ನೂ ಬದಲಾಗಬಹುದು. ಇರಾನ್‌ನ ಸೆಂಟ್ರಲ್ ಬ್ಯಾಂಕ್ ಈ ಹಿಂದೆ ಮಾಡಿದಂತೆ ದರವನ್ನು ಸುಧಾರಿಸುವ ಪ್ರಯತ್ನದಲ್ಲಿ ಹೆಚ್ಚು ಕರೆನ್ಸಿಗಳೊಂದಿಗೆ ಮಾರುಕಟ್ಟೆಯಲ್ಲಿ ಪ್ರವಾಹ ಮಾಡಬಹುದು ಎಂದು ಹೇಳಲಾಗುತ್ತಿದೆ. ರಿಯಾಲ್ ಮೌಲ್ಯದಲ್ಲಿ ತೀಕ್ಷ್ಣವಾದ ಕುಸಿತ ಕಂಡು ಬರುತ್ತಿದೆ.
2015 ರಲ್ಲಿ ವಿಶ್ವದ ಶಕ್ತಿಶಾಲಿ ದೇಶಗಳನ್ನು ಇರಾನ್ ಎದುರು ಹಾಕಿಕೊಂಡಾಗಲು ಇರಾನ್‌ನ ರಿಯಾಲ್ ಒಂದು ಡಾಲರ್‌ಗೆ 32,000 ರಷ್ಟಿತ್ತು. ಜುಲೈ 30 ರಂದು ಇರಾನ್‌ನ ಸುಧಾರಣಾವಾದಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಪ್ರಮಾಣ ವಚನ ಸ್ವೀಕರಿಸಿದ ದಿನ ಡಾಲರ್ ವಿರುದ್ಧ ರಿಯಾಲ್ ಮೌಲ್ಯ 584,000 ಆಗಿತ್ತು. 2018 ರಲ್ಲಿ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರು. ಇದು ಇಂದಿಗೂ ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಮುಂದುವರೆಸಿಕೊಂಡು ಬರುವಂತೆ ಮಾಡಿದೆ.
ಇರಾನ್‌ನ ಆರ್ಥಿಕತೆಯು ಅಂತಾರಾಷ್ಟ್ರೀಯ ನಿರ್ಬಂಧಗಳ ಅಡಿ ಮುಂದುವರೆಯುತ್ತಿದೆ. ಮೇ ತಿಂಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತಪಟ್ಟ ನಂತರ ಆಯ್ಕೆಯಾದ ಪೆಜೆಶ್ಕಿಯಾನ್, ಪಾಶ್ಚಿಮಾತ್ಯ ನಿರ್ಬಂಧಗಳನ್ನು ಸರಾಗಗೊಳಿಸುವ ಒಪ್ಪಂದವನ್ನು ಮಾಡಿಕೊಳ್ಳುವ ಭರವಸೆಯ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಆದಾಗ್ಯೂ, ಇರಾನ್‌ನ ಸರ್ಕಾರವು ಅಮೆರಿಕದ ಚುನಾವಣೆಯಲ್ಲಿ ಗೆದ್ದವರ ಜೊತೆ ಸಂಬಂಧ ಗಟ್ಟಿಗಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದೆ.