ನವದೆಹಲಿ:ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಭಾರತದ ಜವಳಿ ರಫ್ತು ಈ ವರ್ಷದ ಮೇ ತಿಂಗಳಲ್ಲಿ ಶೇ 9.6ರಷ್ಟು ಏರಿಕೆಯಾಗಿದೆ ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಟೆಕ್ಸ್ಟೈಲ್ ಇಂಡಸ್ಟ್ರಿ (ಸಿಐಟಿಐ) ವರದಿ ತಿಳಿಸಿದೆ. ಯುರೋಪಿಯನ್ ಒಕ್ಕೂಟ (ಇಯು), ಅಮೆರಿಕ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳ ಹೊರತಾಗಿಯೂ ಭಾರತದ ಜವಳಿ ರಫ್ತು ಹೆಚ್ಚಾಗಿರುವುದು ಗಮನಾರ್ಹ. ಇದಲ್ಲದೆ, ದೇಶದಿಂದ ಸಿದ್ಧ ಉಡುಪುಗಳ ರಫ್ತು ಇದೇ ಅವಧಿಯಲ್ಲಿ ಶೇಕಡಾ 9.84ರಷ್ಟು ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.
ಮೇ 2024 ರಲ್ಲಿ ಜವಳಿ ಮತ್ತು ಉಡುಪುಗಳ ಸಂಯೋಜಿತ ರಫ್ತು ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಶೇಕಡಾ 9.70ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಸಿಟಿಐ ವರದಿಯು ಎತ್ತಿ ತೋರಿಸಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮೇ 2024ರಲ್ಲಿ ಭಾರತದ ಒಟ್ಟಾರೆ ರಫ್ತು 68.29 ಬಿಲಿಯನ್ ಡಾಲರ್ಗೆ ಏರಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 10.2ರಷ್ಟು ಗಣನೀಯ ಹೆಚ್ಚಳವಾಗಿದೆ.
2024ರ ಏಪ್ರಿಲ್-ಮೇ ಅವಧಿಯಲ್ಲಿ, ಭಾರತೀಯ ಜವಳಿ ರಫ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 6.04ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಉಡುಪು ರಫ್ತು ಶೇಕಡಾ 4.46ರಷ್ಟು ಹೆಚ್ಚಾಗಿದೆ. 2024ರ ಏಪ್ರಿಲ್-ಮೇ ಅವಧಿಯಲ್ಲಿ ಜವಳಿ ಮತ್ತು ಉಡುಪುಗಳ ಸಂಚಿತ ರಫ್ತು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 5.34ರಷ್ಟು ಏರಿಕೆ ಕಂಡಿದೆ.