ಕರ್ನಾಟಕ

karnataka

6,915 ಕೋಟಿ ರೂ.ಗೆ ತಲುಪಿದ ಭಾರತದ ರಕ್ಷಣಾ ಸಾಮಗ್ರಿ ರಫ್ತು: ಶೇ 78ರಷ್ಟು ಹೆಚ್ಚಳ - Indias Defence Exports

By ETV Bharat Karnataka Team

Published : Aug 13, 2024, 8:32 PM IST

ಭಾರತದ ರಕ್ಷಣಾ ಸಾಧನಗಳ ರಫ್ತು ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಶೇ 78ರಷ್ಟು ಏರಿಕೆಯಾಗಿದೆ.

ಭಾರತದಲ್ಲಿ ತಯಾರಾದ ರಕ್ಷಣಾ ಸಾಧನಗಳು (ಸಂಗ್ರಹ ಚಿತ್ರ)
ಭಾರತದಲ್ಲಿ ತಯಾರಾದ ರಕ್ಷಣಾ ಸಾಧನಗಳು (ಸಂಗ್ರಹ ಚಿತ್ರ) (IANS)

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (2024-25) ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಮಿಲಿಟರಿ ಯಂತ್ರಾಂಶಗಳ ರಫ್ತು ಶೇಕಡಾ 78 ರಷ್ಟು ಏರಿಕೆಯಾಗಿ 6,915 ಕೋಟಿ ರೂ.ಗೆ ತಲುಪಿದೆ. 2023-24 ಇದೇ ತ್ರೈಮಾಸಿಕದಲ್ಲಿ ಈ ಪ್ರಮಾಣ 3,885 ಕೋಟಿ ರೂಪಾಯಿಗಳಾಗಿತ್ತು.

ಜುಲೈ 22 ರಂದು ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ 2023-24 ರ ಪ್ರಕಾರ, ಭಾರತವು 2023-24ರ ಹಣಕಾಸು ವರ್ಷದಲ್ಲಿ ಒಟ್ಟು 2.5 ಬಿಲಿಯನ್ ಡಾಲರ್ (20,915 ಕೋಟಿ ರೂ.) ರಕ್ಷಣಾ ಸಾಧನಗಳನ್ನು ರಫ್ತು ಮಾಡಿದೆ. ಇದು 2022-23ರ ಹಣಕಾಸು ವರ್ಷದಲ್ಲಿ ಇದ್ದ 2 ಬಿಲಿಯನ್ ಡಾಲರ್​ಗೆ ಹೋಲಿಸಿದರೆ ಶೇಕಡಾ 25 ರಷ್ಟು ಹೆಚ್ಚಳವಾಗಿದೆ.

"ಭಾರತದ ರಕ್ಷಣಾ ರಫ್ತು 2017 ರ ಹಣಕಾಸು ವರ್ಷದಿಂದ 12 ಪಟ್ಟು ಹೆಚ್ಚಾಗಿದೆ. ಇದು ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಮಹತ್ವದ ಪಾತ್ರ ವಹಿಸುವ ದೇಶದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ" ಎಂದು ಸಮೀಕ್ಷೆ ಹೇಳಿದೆ. ರಕ್ಷಣಾ ಸಾಧನಗಳನ್ನು ತಯಾರಿಸುವ ತಯಾರಕರಿಗೆ 2023 ರ ಹಣಕಾಸು ವರ್ಷದಲ್ಲಿ 1,414 ಅನುಮತಿಗಳನ್ನು ನೀಡಲಾಗಿತ್ತು. ಈ ಸಂಖ್ಯೆ 2024 ರ ಹಣಕಾಸು ವರ್ಷದಲ್ಲಿ 1,507 ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಮೋದಿ ಸರ್ಕಾರವು ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ ನೀಡಿದೆ ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದರ ಜೊತೆಗೆ 2028-29 ರ ವೇಳೆಗೆ 50,000 ಕೋಟಿ ರೂ.ಗಳಷ್ಟು ಮೌಲ್ಯದ ಮಿಲಿಟರಿ ಯಂತ್ರಾಂಶಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ಹೇಳಿದ್ದಾರೆ.

ಸರ್ಕಾರವು ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಕಾರ್ಪೊರೇಟೀಕರಣಗೊಳಿಸಿದೆ, ಇದು ಅವುಗಳನ್ನು ಹೆಚ್ಚು ತಂತ್ರಜ್ಞಾನ ಸ್ನೇಹಿಯನ್ನಾಗಿ ಮಾಡಿದೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಿದೆ. ಇದರಿಂದ ಉತ್ಪಾದನೆಯು ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ರಕ್ಷಣಾ ವಲಯದ ಉತ್ತೇಜನಕ್ಕೆ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್, ಟಾಟಾ ಮತ್ತು ಎಲ್ &ಟಿಯಂತಹ ದೇಶೀಯ ಕಂಪನಿಗಳು ಭರವಸೆದಾಯಕವಾಗಿವೆ ಎಂದು ಅವರು ಹೇಳಿದರು.

ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಾದ್ಯಂತ 85 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವುದರೊಂದಿಗೆ, ಭಾರತದ ರಕ್ಷಣಾ ಉದ್ಯಮವು ತನ್ನ ವಿನ್ಯಾಸ ಮತ್ತು ಅಭಿವೃದ್ಧಿಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಪ್ರಸ್ತುತ ಸುಮಾರು 100 ಸಂಸ್ಥೆಗಳು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ರಫ್ತಿಗೆ ಉತ್ತೇಜನ ನೀಡಲು ಸರ್ಕಾರವು ಕಳೆದ 10 ವರ್ಷಗಳಲ್ಲಿ "ಮೇಕ್ ಇನ್ ಇಂಡಿಯಾ" ನಂಥ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಮತ್ತು ಆರ್ಥಿಕ ಸುಧಾರಣೆಗಳನ್ನು ಹೊರತಂದಿದೆ. ರಫ್ತು ಕಾರ್ಯವಿಧಾನಗಳನ್ನು ಸರಳೀಕರಿಸಲಾಗಿದೆ ಮತ್ತು ಎಂಡ್-ಟು-ಎಂಡ್ ಆನ್ ಲೈನ್ ರಫ್ತು ವ್ಯವಸ್ಥೆಯೊಂದಿಗೆ ವಿಳಂಬವನ್ನು ಕಡಿಮೆ ಮಾಡಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : 5ಜಿ ಸ್ಮಾರ್ಟ್​ಫೋನ್​ಗಳ ಮಾರುಕಟ್ಟೆ ಪಾಲು ಶೇ 77ಕ್ಕೆ ಏರಿಕೆ: ಸರಾಸರಿ ಮಾರಾಟ ಬೆಲೆ ಶೇ 22ರಷ್ಟು ಇಳಿಕೆ - India 5G Smartphone Market

ABOUT THE AUTHOR

...view details