ಕರ್ನಾಟಕ

karnataka

ETV Bharat / business

2025ಕ್ಕೆ ವಿಶ್ವದ ಅತಿ ವೇಗದ ಆರ್ಥಿಕ ಬೆಳವಣಿಗೆಯ ದೇಶವಾಗಲಿದೆ ಭಾರತ: ಮಾಸ್ಟರ್ ಕಾರ್ಡ್ - FASTEST GROWING ECONOMY

2025ರ ವೇಳೆಗೆ ಭಾರತ ಅತಿ ವೇಗದ ಬೆಳವಣಿಗೆಯ ಆರ್ಥಿಕತೆಯಾಗಲಿದೆ ಎಂದು ವರದಿ ಹೇಳಿದೆ.

2025ಕ್ಕೆ ವಿಶ್ವದ ಅತಿ ವೇಗದ ಆರ್ಥಿಕ ಬೆಳವಣಿಗೆಯ ದೇಶವಾಗಲಿದೆ ಭಾರತ: ಮಾಸ್ಟರ್ ಕಾರ್ಡ್ ವರದಿ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : 6 hours ago

ನವದೆಹಲಿ: ಮಧ್ಯಮ ವರ್ಗದ ನಾಗರಿಕರ ಹೆಚ್ಚಳ ಮತ್ತು ನಿರಂತರ ಹೂಡಿಕೆಯಿಂದ ಪ್ರೇರಿತವಾಗಿರುವ ಭಾರತವು 2025ರ ವೇಳೆಗೆ ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುವ ಪ್ರಮುಖ ಆರ್ಥಿಕತೆಯಾಗಲಿದೆ ಎಂದು ಮಾಸ್ಟರ್ ಕಾರ್ಡ್ ಎಕನಾಮಿಕ್ಸ್ ಇನ್‌ಸ್ಟಿಟ್ಯೂಟ್ (ಎಂಇಐ) ಸೋಮವಾರ ತನ್ನ ವಾರ್ಷಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ತಿಳಿಸಿದೆ.

ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, 2025ರಲ್ಲಿ ಶೇಕಡಾ 6.6ರಷ್ಟು ಜಿಡಿಪಿ ಬೆಳವಣಿಗೆ ಮತ್ತು ಗ್ರಾಹಕ ವೆಚ್ಚ ಶೇಕಡಾ 6.2ರಷ್ಟಿರಲಿದೆ ಎಂದು ಎಂಇಐ ವರದಿ ಅಂದಾಜಿಸಿದೆ.

"ದೃಢವಾದ ಮಧ್ಯಮ ವರ್ಗ ಮತ್ತು ಸುಸ್ಥಿರ ಹೂಡಿಕೆಯಿಂದ ಉತ್ತೇಜಿತವಾಗಿರುವ ಭಾರತವು ಜಾಗತಿಕ ಆರ್ಥಿಕ ಸವಾಲುಗಳ ನಡುವೆ ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಂಡಿದೆ. 2025 ರಲ್ಲಿ ಭಾರತವು ಜಾಗತಿಕ ಬೆಳವಣಿಗೆಗೆ ಉನ್ನತ ಕೊಡುಗೆದಾರ ದೇಶಗಳಲ್ಲಿ ಒಂದಾಗುವ ಸಾಧ್ಯತೆಯಿದೆ" ಎಂದು ವರದಿ ಹೇಳಿದೆ.

ಮಹಿಳಾ ಕಾರ್ಮಿಕರ ಸಂಖ್ಯೆಯಲ್ಲಿ ಪ್ರಗತಿ: ಭಾರತದಲ್ಲಿ 25ರಿಂದ 54 ವಯಸ್ಸಿನ ಮಹಿಳಾ ಕಾರ್ಮಿಕರ ಸಂಖ್ಯೆಯಲ್ಲಿ ಅತ್ಯುತ್ತಮ ಬೆಳವಣಿಗೆಯಾಗಿದೆ. 2019ಕ್ಕೆ ಹೋಲಿಸಿದರೆ ಈ ಪ್ರಮಾಣ ಶೇಕಡಾ 12ರಷ್ಟು ಹೆಚ್ಚಾಗಿದೆ.

2024ರಲ್ಲಿ ಶೇ 3.1ರಷ್ಟಿರುವ ಜಾಗತಿಕ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ 3.2ರಷ್ಟು ಇರಲಿದೆ ಎಂದು ಎಂಇಐ ಅಂದಾಜಿಸಿದೆ. ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ (ಎಲ್ಎಸಿ)ನ ಹೆಚ್ಚಿನ ಭಾಗಗಳಲ್ಲಿ ಸಾಧಾರಣ ವಿಸ್ತರಣೆಯೊಂದಿಗೆ ಯುಎಸ್, ಭಾರತ ಮತ್ತು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಲ್ಲಿ ಜಿಡಿಪಿ ಬೆಳವಣಿಗೆ ದೃಢವಾಗಿರುವ ನಿರೀಕ್ಷೆಯಿದೆ.

"2024ನೇ ವರ್ಷವು ಸಾಮಾನ್ಯ ಸ್ಥಿತಿಗೆ ಮರಳುವ ವರ್ಷವಾಗಿದ್ದರೆ, 2025ರ ವರ್ಷದಲ್ಲಿ ಏರಿಳಿತ ಕಡಿಮೆಯಾಗುವುದರಿಂದ ಮತ್ತು ವಿತ್ತೀಯ ನೀತಿಗಳು ಸರಾಗವಾಗುವುದರಿಂದ ಈ ವರ್ಷ ಸಾಮಾನ್ಯ ವರ್ಷವಾಗಿದ್ದು, ಆರ್ಥಿಕ ಬೆಳವಣಿಗೆಯಿಂದ ಗ್ರಾಹಕರಿಗೆ ಲಾಭವಾಗಲಿದೆ" ಎಂದು ಮಾಸ್ಟರ್ ಕಾರ್ಡ್​ನ ಏಷ್ಯಾ ಪೆಸಿಫಿಕ್ ವಿಭಾಗದ ಮುಖ್ಯ ಅರ್ಥಶಾಸ್ತ್ರಜ್ಞ ಡೇವಿಡ್ ಮನ್ ಹೇಳಿದ್ದಾರೆ.

ಆದಾಗ್ಯೂ, ಜಪಾನ್​ನಲ್ಲಿ ಸಂಭಾವ್ಯ ಬಡ್ಡಿದರ ಏರಿಕೆ ಅಥವಾ ಯುಎಸ್ ಸುಂಕಗಳಂತಹ ನೀತಿ ನಿರ್ಧಾರಗಳು ಈ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಸಂಭಾವ್ಯ ವ್ಯಾಪಾರ ಅಡೆತಡೆಗಳಿಗೆ ಸಿದ್ಧವಾಗಿದ್ದುಕೊಂಡು ವ್ಯವಹಾರಗಳು ಗ್ರಾಹಕರ ಆಶಾವಾದವನ್ನು ಬಳಸಿಕೊಳ್ಳಬೇಕು ಎಂದು ಮನ್ ಹೇಳಿದರು.

ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಸಿಂಗಾಪುರ್‌ಗಳಲ್ಲಿ ಜಗತ್ತಿನ ಇತರ ಭಾಗಗಳಿಗಿಂತ ಹಣದುಬ್ಬರ ಹೆಚ್ಚಾಗಿದೆ. ಈ ದೇಶಗಳಲ್ಲಿ ಹಣದುಬ್ಬರ ಮಟ್ಟಗಳು ಸರಿಸುಮಾರು 2-3 ಶೇಕಡಾಕ್ಕೆ ಇಳಿಯುವ ಸಾಧ್ಯತೆ ಮತ್ತು ಕೇಂದ್ರ ಬ್ಯಾಂಕುಗಳು ಹಣಕಾಸು ನೀತಿಗಳನ್ನು ಸರಾಗಗೊಳಿಸುವುದರಿಂದ ಆರ್ಥಿಕ ಸ್ಥಿತಿಗಳು ಸುಧಾರಣೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಕಳೆದ ದಶಕದಲ್ಲಿ ಭಾರತದ ತಲಾ ಹಣ್ಣು ಮತ್ತು ತರಕಾರಿ ಲಭ್ಯತೆ ಗಮನಾರ್ಹ ಹೆಚ್ಚಳ - FRUIT VEGETABLE PRODUCTION

ABOUT THE AUTHOR

...view details