ನವದೆಹಲಿ: ಸಾಮಾನ್ಯ ನಾಗರಿಕರಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುವ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿಯಲ್ಲಿ 21 ಕೋಟಿಗೂ ಹೆಚ್ಚು ಜನ ವಿಮೆಯ ಪ್ರಯೋಜನ ಪಡೆದಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಮೇ 2015 ರಲ್ಲಿ ಪ್ರಾರಂಭಿಸಲಾದ ಪಿಎಂಜೆಜೆಬಿವೈ ಟರ್ಮ್ ಲೈಫ್ ಇನ್ಶೂರೆನ್ಸ್ ಯೋಜನೆಯಾಗಿದ್ದು, ಈ ಯೋಜನೆಯಡಿ ಯಾವುದೇ ಕಾರಣದಿಂದ ವಿಮಾದಾರನ ಸಾವು ಸಂಭವಿಸಿದರೆ ಅವರ ಕುಟುಂಬಕ್ಕೆ 2 ಲಕ್ಷ ರೂ. ನೀಡಲಾಗುತ್ತದೆ.
"ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯು 21 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ತಲಾ 2 ಲಕ್ಷ ರೂ.ಗಳ ಜೀವ ವಿಮಾ ರಕ್ಷಣೆಯನ್ನು ಒದಗಿಸಿದೆ. ಅನಿಶ್ಚಿತತೆಯ ಸಮಯದಲ್ಲಿ ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಿದೆ" ಎಂದು ಸಚಿವಾಲಯವು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಅಕ್ಟೋಬರ್ 20 ರವರೆಗೆ ಈ ಯೋಜನೆಯಡಿ ಒಟ್ಟು 21.67 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ಯೋಜನೆಯಡಿ ಕ್ಲೈಮ್ಗಳ ಸಂಚಿತ ಸಂಖ್ಯೆ 8,60,575 ಆಗಿದ್ದು, ಇದರ ಮೌಲ್ಯ 17,211.50 ರೂ. ಆಗಿದೆ.
ವೈಯಕ್ತಿಕ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆ ಹೊಂದಿರುವ 18-50 ವರ್ಷ ವಯಸ್ಸಿನ ಯಾರಾದರೂ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ವಾರ್ಷಿಕ 436 ರೂ.ಗಳ ಪ್ರೀಮಿಯಂ ಪಾವತಿಸಬೇಕಿದ್ದು, ಯಾವುದೇ ಕಾರಣದಿಂದ ಖಾತೆದಾರನ ಸಾವು ಸಂಭವಿಸಿದರೆ ಆತನ ಕುಟುಂಬಕ್ಕೆ 2 ಲಕ್ಷ ರೂ.ಗಳ ಜೀವ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.
ಏತನ್ಮಧ್ಯೆ, ಹಣಕಾಸು ಸಚಿವಾಲಯವು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಮತ್ತು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಗಳು ಹಾಗೂ ಇತರ ಯೋಜನೆಗಳಿಗೆ ಸಂಬಂಧಿಸಿದಂತೆ 2024 ರ ಹಣಕಾಸು ವರದಿಯನ್ನು ಪ್ರಕಟಿಸಿದೆ.
ಅಪಘಾತ ವಿಮಾ ರಕ್ಷಣೆ ಯೋಜನೆಯಾಗಿರುವ ಪಿಎಂಎಸ್ಬಿವೈ ಯೋಜನೆಯಡಿ ಸುಮಾರು 48 ಕೋಟಿ ನಾಗರಿಕರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿ ಅಪಘಾತದಲ್ಲಿ ಸಾವಿಗೀಡಾಗುವ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂ. ನೀಡಲಾಗುತ್ತದೆ. ಪಿಎಂಎಸ್ಬಿವೈ ಯೋಜನೆಯಡಿ ಒಟ್ಟಾರೆ 47.59 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. ನವೆಂಬರ್ 20 ರವರೆಗೆ ಒಟ್ಟು 1,93,964 ರಷ್ಟು ಕ್ಲೈಮ್ಗಳು ಬಂದಿದ್ದು, 1,47,641 ಕ್ಲೈಮ್ಗಳನ್ನು ಸೆಟಲ್ ಮಾಡಲಾಗಿದೆ.
ಇದಲ್ಲದೆ ಜನ್ ಧನ್ ಖಾತೆಗಳ ಪೈಕಿ ಸುಮಾರು 55.6 ಪ್ರತಿಶತ (29.56 ಕೋಟಿ) ಖಾತೆದಾರರು ಮಹಿಳೆಯರಾಗಿದ್ದಾರೆ ಮತ್ತು 66.6 ಪ್ರತಿಶತ (35.37 ಕೋಟಿ) ಜನ್-ಧನ್ ಖಾತೆಗಳು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿವೆ ಎಂದು ಸಚಿವಾಲಯ ಹೇಳಿದೆ. ಸಚಿವಾಲಯದ ಪ್ರಕಾರ, ಪಿಎಂಜೆಡಿವೈ ಖಾತೆಗಳ ಅಡಿಯಲ್ಲಿ ಒಟ್ಟು 2,31,236 ಕೋಟಿ ರೂ. ಠೇವಣಿಯಾಗಿದೆ.
ಇದನ್ನೂ ಓದಿ : ಇಪಿಎಫ್ಒ ಸದಸ್ಯರಿಗೆ ಶುಭ ಸುದ್ದಿ - ಮುಂದಿನ ವರ್ಷದಿಂದ ಕ್ಲೈಮ್ ಮಾಡಿದ ಹಣ ಎಟಿಎಂನಿಂದ ವಿತ್ಡ್ರಾಗೆ ಅವಕಾಶ! - EPFO ATM WITHDRAWAL