ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ಸೇವೆ (ಕೆಎಎಸ್)ಯ ಅಧಿಕಾರಿಗಳ ನೇಮಕಕ್ಕೆ ಇದೇ ತಿಂಗಳ 29ರಂದು ನಿಗದಿಯಾಗಿರುವ ಮರು ಪರೀಕ್ಷೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ಅಭ್ಯರ್ಥಿ ಸೂಧಿರ್ತಿ ಬೈರಪ್ಪ ಎಂಬವರು ಸಲ್ಲಿಸಿದ್ದ ಮೂಲ ಅರ್ಜಿಯಲ್ಲಿ ತಡೆಯಾಜ್ಞೆ ತೆರವು ಕೋರಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಧಾರವಾಡ ಪೀಠ ಈ ಆದೇಶ ಮಾಡಿದೆ.
ಕೆಪಿಎಸ್‌ಸಿ, ಸರ್ಕಾರ ಮತ್ತು ಅರ್ಜಿದಾರರ ಪರ ಸಮಗ್ರ ವಾದವನ್ನು ಸುದೀರ್ಘವಾಗಿ ಆಲಿಸಿದ ಬಳಿಕ ನ್ಯಾಯಾಲಯ, ಮರು ಪರೀಕ್ಷೆಗೆ ಅ.16ರಂದು ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ತೆರವುಗೊಳಿಸಿ ಆದೇಶಿಸಿತು.
ಅಲ್ಲದೆ, ಮರು ಪರೀಕ್ಷೆಯನ್ನು ಇದೇ 29ರಂದು ನಿಗದಿಪಡಿಸಲಾಗಿದೆ. ಅರ್ಜಿದಾರರು ಪರೀಕ್ಷೆಯಲ್ಲಿ ಭಾಗವಹಿಸಿದರೆ ಮತ್ತು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ನಂತರ ಇಡೀ ಚಿತ್ರಣವೇ ಬದಲಾಗುತ್ತದೆ. ಅರ್ಜಿ ಊರ್ಜಿತವಾಗುವುದಿಲ್ಲ. ಹಾಗಾಗಿ ಅರ್ಜಿದಾರರು ತಮ್ಮ ವಾದ ಏನೇ ಇದ್ದರೂ ಅದನ್ನು ಕರ್ನಾಟಕ ಆಡಳಿತ ನಾಯಮಂಡಳಿ(ಕೆಎಟಿ) ಮುಂದೆ ಮಂಡಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಪೀಠ ಹೇಳಿದೆ.
ಆದರೆ, ಪರೀಕ್ಷಾ ಫಲಿತಾಂಶವನ್ನು ಅಂದರೆ ಅರ್ಜಿದಾರರ ಉತ್ತರ ಪತ್ರಿಕೆಗಳನ್ನು ಕೆಪಿಎಸ್‌ಸಿ ಹಾಗೆಯೇ ಇಟ್ಟುಕೊಳ್ಳಬೇಕು. ಏಕೆಂದರೆ ಒಂದು ವೇಳೆ ಅರ್ಜಿದಾರರಿಗೆ ಕಾನೂನು ಹೋರಾಟದಲ್ಲಿ ವ್ಯತಿರಿಕ್ತ ಆದೇಶಗಳು ಬಂದರೆ ಆಗ ಅವುಗಳ ಅಗತ್ಯತೆ ಎದುರಾಗಲಿದೆ ಎಂದು ಪೀಠ ಇದೇ ವೇಳೆ ತಿಳಿಸಿದೆ.
ಹಾಗಾಗಿ ಕೆಪಿಎಸ್‌ಸಿ ಈ ಮೊದಲು ನಡೆಸಿದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು ಎಂದು ನ್ಯಾಯಾಲಯ, ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಕಳೆದ ಆ.27ರಂದು ಕೆಪಿಎಸ್‌ಸಿ 394 ಕೆಎಎಸ್ ಹುದ್ದೆಗಳ ನೇಮಕಕ್ಕೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಿತ್ತು. ಅದರಲ್ಲಿ 2.10 ಲಕ್ಷ ಅರ್ಜಿ ಸಲ್ಲಿಸಿದ್ದವರ ಪೈಕಿ 1.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ದೊಡ್ಡ ಲೋಪಗಳು ಉಂಟಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸುವಂತೆ ಅಭ್ಯರ್ಥಿಗಳು ಆಯೋಗದ ಮೇಲೆ ಒತ್ತಡ ಹಾಕಿದ್ದರು. ಕೊನೆಗೆ ಸರ್ಕಾರ ಆಯೋಗಕ್ಕೆ ಪೂರ್ವಾಭಾವಿ ಪರೀಕ್ಷೆಯನ್ನು ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸಲು ಆದೇಶ ನೀಡಿತ್ತು. ಅದರಂತೆ ಆಯೋಗ ಡಿ.29ಕ್ಕೆ ಮರುಪರೀಕ್ಷೆ ದಿನಾಂಕವನ್ನು ನಿಗದಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಟಿಕೆಟ್ ಖರೀದಿ ಸ್ಥಳ ದಾಟಿ ಪ್ರಯಾಣಿಸಿದ ವೇಳೆ ವ್ಯಕ್ತಿ ಮೃತಪಟ್ಟರೂ ರೈಲ್ವೆ ಪರಿಹಾರ ನೀಡಬೇಕು: ಹೈಕೋರ್ಟ್