ಇಂದೋರ್(ಮಧ್ಯ ಪ್ರದೇಶ): ಬೀದಿಗಳಲ್ಲಿ ಹರಕಲು ಬಟ್ಟೆ ಹಾಕಿಕೊಂಡು ದೈನೇಸಿ ಸ್ಥಿತಿಯಲ್ಲಿರುವ ಭಿಕ್ಷುಕರ ಕಂಡ ಒಳ್ಳೆಯ ಮನಸ್ಸಿನವರು ಮರುಕಪಟ್ಟು ಕೈಲಾದಷ್ಟು ದಾನ ನೀಡುವುದು ಸಹಜ. ಆದರೆ, ಜನವರಿ 1ರಿಂದ ನೀವು ಭಿಕ್ಷೆ ನೀಡಿದಲ್ಲಿ ಕೇಸ್ ಜಡಿಸಿಕೊಳ್ಳುವುದು ಮಾತ್ರ ಪಕ್ಕಾ.
ಹೌದು, ಮಧ್ಯ ಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಭಿಕ್ಷಾಟನೆಯನ್ನೇ ನಿಲ್ಲಿಸುವ ಸಲುವಾಗಿ ಅಲ್ಲಿನ ಜಿಲ್ಲಾಡಳಿತ ಇಂಥದ್ದೊಂದು ಕಠಿಣ ನಿರ್ಣಯಕ್ಕೆ ಬಂದಿದೆ. ಇಂದೋರ್ ಅನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ಪ್ರಯತ್ನದ ಭಾಗವಾಗಿ, ಭಿಕ್ಷೆ ನೀಡುವವರ ವಿರುದ್ಧ ಜನವರಿ 1, 2025ರಿಂದ ಕೇಸ್ ದಾಖಲಿಸಲಾಗುವುದು ಎಂದು ಸೂಚಿಸಿದೆ.
ಇಂದೋರ್‌ನಲ್ಲಿ ಭಿಕ್ಷಾಟನೆ ನಿಷೇಧಿಸಿದೆ. ಆದರೆ, ದಾನ ನೀಡುವವರಿಂದಾಗಿ ಇನ್ನೂ ಸಾಮಾಜಿಕ ಅನಿಷ್ಟತೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
"ಭಿಕ್ಷಾಟನೆ ವಿರುದ್ಧದ ಜಾಗೃತಿ ಅಭಿಯಾನವು ಡಿಸೆಂಬರ್ನಿಂದ ನಗರದಲ್ಲಿ ಆರಂಭವಾಗಲಿದೆ. ಯಾವುದೇ ವ್ಯಕ್ತಿ ಜನವರಿ 1 ರಿಂದ ಭಿಕ್ಷೆ ನೀಡುತ್ತಿರುವುದು ಕಂಡುಬಂದರೆ, ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗುವುದು. ಜನರಿಗೆ ಭಿಕ್ಷೆ ನೀಡುವ ಮೂಲಕ ಪಾಪದಲ್ಲಿ ಪಾಲುದಾರರಾಗಬೇಡಿ ಎಂದು ಇಂದೋರ್‌ನ ಎಲ್ಲಾ ನಿವಾಸಿಗಳಿಗೆ ನಾನು ಮನವಿ ಮಾಡುತ್ತೇನೆ" ಎಂದು ಅಧಿಕಾರಿ ಹೇಳಿದರು.
ಭಿಕ್ಷೆ ಎತ್ತಿಸುವ ಗ್ಯಾಂಗ್ ಪತ್ತೆ: ನಗರದಲ್ಲಿ ಜೀವನಕ್ಕಾಗಿ ಭಿಕ್ಷೆ ಬೇಡುವ ಜನರು ಒಂದೆಡೆ ಇದ್ದರೆ, ಅದನ್ನೇ ಬಂಡವಾಳ ಮಾಡಿಕೊಂಡು ಭಿಕ್ಷೆಯ 'ವ್ಯವಹಾರ' ನಡೆಸುವ ಗ್ಯಾಂಗ್ ಅನ್ನು ಪತ್ತೆ ಮಾಡಲಾಗಿದೆ. ನಿರ್ಗತಿಕರನ್ನು ಭಿಕ್ಷೆ ಬೇಡುವ ದಂಧೆಗೆ ತಳ್ಳಿ ಅವರು ಹಣ ಮಾಡುತ್ತಿದ್ದಾರೆ. ಇದನ್ನು ಮಟ್ಟಹಾಕಬೇಕಿದೆ ಎಂದು ಜಿಲ್ಲಾಡಳಿತ ಹೇಳಿದೆ. ಇನ್ನೂ, ಭಿಕ್ಷುಕರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅವರನ್ನು ಭಿಕ್ಷಾಟನೆಯಿಂದ ತೊಡೆದು ಹಾಕಿ ಜೀವನ ಕಟ್ಟಿಕೊಳ್ಳಲು ನೆರವು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಂದೋರ್ ಸೇರಿದಂತೆ ದೇಶದ 10 ನಗರಗಳನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸಲು ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: 'ಪ್ಯಾಲೆಸ್ಟೈನ್' ಬರಹದ ಬ್ಯಾಗ್ ಹೆಗಲಿಗೇರಿಸಿಕೊಂಡು ಸಂಸತ್ತಿಗೆ ಬಂದ ಪ್ರಿಯಾಂಕಾ ವಾದ್ರಾ