ಬೆಳಗಾವಿ: ವಿಧಾನಸಭೆಯಲ್ಲಿಂದು ಒಟ್ಟು ಎಂಟು ಮಸೂದೆಗಳು ಅಂಗೀಕಾರಗೊಂಡವು. ಇದರ ಜೊತೆಗೆ, 2024ನೇ ಸಾಲಿನ ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ವಿಧೇಯಕ ಮಂಡಿಸಲಾಯಿತು. ಇದೇ ವೇಳೆ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕವನ್ನು ಹಿಂಪಡೆಯಲಾಯಿತು.
ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ, ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, ಬಿಬಿಎಂಪಿ ಎರಡನೇ ತಿದ್ದುಪಡಿ ವಿಧೇಯಕ, ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ, 2024ನೇ ಸಾಲಿನ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಕರ್ನಾಟಕ ರಾಜ್ಯ ವಿವಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಸ್ ಮಸೂದೆಗಳು ಅಂಗೀಕಾರಗೊಂಡವು.
ಅಸುರಕ್ಷಿತ ಕೊಳವೆ ಬಾವಿ ನಿಯಂತ್ರಣ ಮಸೂದೆ ಅಂಗೀಕಾರ: ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕೃತವಾಗಿದೆ. ಕಾರ್ಯನಿರತವಲ್ಲದ ಅಥವಾ ಸ್ಥಗಿತಗೊಂಡಿರುವ ಕೊಳವೆ ಬಾವಿಗಳಲ್ಲಿ ಮಕ್ಕಳು ಬಿದ್ದು ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ಈ ವಿಧೇಯಕ ತರಲಾಗುತ್ತಿದೆ. ಜಮೀನು ಮಾಲೀಕರು, ಏಜೆನ್ಸಿಗಳು ಕೊಳವೆ ಬಾವಿಗೆ ಅಗತ್ಯ ಸುರಕ್ಷತಾ ಕ್ರಮ ಉಲ್ಲಂಘಿಸಿದರೆ ಗರಿಷ್ಟ 1 ವರ್ಷ ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸುವ ಕಾನೂನು ಇದಾಗಿರಲಿದೆ.
ಚಾಣಕ್ಯ ವಿವಿಗೆ ರಾಜ್ಯ ಸರ್ಕಾರದ ಪ್ರತಿನಿಧಿ: ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. 2021ರಲ್ಲಿ ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಜಾರಿಗೆ ಬಂದಿತ್ತು. 27 ಖಾಸಗಿ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ಪ್ರಬಂಧಕ ಮಂಡಳಿಗಳಲ್ಲಿ ರಾಜ್ಯ ಸರ್ಕಾರದ ಪ್ರಾತಿನಿದ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಚಾಣಕ್ಯ ಖಾಸಗಿ ವಿವಿ ಕಾಯ್ದೆಯಡಿ ಇದಕ್ಕೆ ಅವಕಾಶ ಇರಲಿಲ್ಲ. ಈ ತಿದ್ದುಪಡಿಯಿಂದ ಇದೇ ಅವಕಾಶವನ್ನು ಚಾಣಕ್ಯ ವಿಶ್ವವಿದ್ಯಾಲಯದ ಪ್ರಬಂಧಕ ಮಂಡಳಿಗೂ ಸಹ ಕಲ್ಪಿಸಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಸ್ ಮಸೂದೆ ಅಂಗೀಕಾರ: ರಾಜ್ಯ ಸರ್ಕಾರ ರೋಪ್ ವೇಗಳ ನಿರ್ವಹಣೆ, ಸುರಕ್ಷತೆ, ಪರವಾನಗಿ, ಮಾನದಂಡ ಸಂಬಂಧ ಕರ್ನಾಟಕ ಪ್ರವಾಸೋದ್ಯಮ ರೋಪ್ ವೇ ಮಸೂದೆ 2024ನ್ನು ಅಂಗೀಕಾರಗೊಂಡಿತು. ಈ ಮಸೂದೆ ಮೂಲಕ ರಾಜ್ಯದ ರೋಪ್ ವೇಗಾಗಿ ಕಾನೂನು ರೂಪಿಸಲಾಗಿದೆ. ಈ ಮಸೂದೆಯಡಿ ರೋಪ್ವೇಗಾಗಿ ಸಲಹಾ ಪ್ರಾಧಿಕಾರವನ್ನು ರಚಿಸಲಾಗುವುದು. ಜೊತೆಗೆ ಪರವಾನಿಗೆ ಪ್ರಾಧಿಕಾರವನ್ನು ರಚಿಸಲಾಗುವುದು. ರೋಪ್ ವೇ ಪರಿಶೀಲನೆಗಳಿಗಾಗಿ ಮುಖ್ಯ ರೋಪ್ ವೇ ಇನ್ಸ್ಪೆಕ್ಟರ್ ಮತ್ತು ಜಿಲ್ಲಾ ರೋಪ್ ವೇ ಇನ್ಸ್ಪೆಕ್ಟರ್ ನೇಮಕ ಮಾಡಲಾಗುವುದು. ಪ್ರಾಧಿಕಾರದ ಅನುಮೋದನೆಯೊಂದಿಗೆ ರೋಪ್ ವೇ ಶುಲ್ಕವನ್ನು ನಿಗದಿ ಮಾಡುವ ಅಧಿಕಾರ ರೋಪ್ ವೇ ನಿರ್ಮಾಣ ಗುತ್ತಿಗೆ ಸಂಸ್ಥೆಗೆ ಇರಲಿದೆ. ಪ್ರಸ್ತಾಪಿತ ಮಸೂದೆ ಪ್ರಕಾರ ಗುತ್ತಿಗೆ ಸಂಸ್ಥೆಗಳು ಕಾಯ್ದೆಯ ನಿಯಮ ಉಲ್ಲಂಘಿಸಿದರೆ ಗರಿಷ್ಠ 1,000 ರೂ. ದಂಡ ವಿಧಿಸಲಾಗುತ್ತದೆ. ಪದೇ ಪದೆ ನಿಯಮ ಉಲ್ಲಂಘಿಸಿದರೆ ನಿತ್ಯ 250 ರೂ. ನಂತೆ ಹೆಚ್ಚುವರಿ ದಂಡ ವಿಧಿಸಲಾಗುವುದು.
ಸರಕು ಮತ್ತು ಸೇವೆಗಳ ತೆರಿಗೆ 2024 ವಿಧೇಯಕ ಅಂಗೀಕಾರ: ಸರಕು ಮತ್ತು ಸೇವೆಗಳ ತೆರಿಗೆ 2024 ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ತೆರಿಗೆದಾರರ ಹಾಗೂ ತೆರಿಗೆ ಸಂಗ್ರಹಿಸುವ ಅಧಿಕಾರಿಗಳ ನಡುವಿನ ಗೊಂದಲಕ್ಕೆ ತೆರೆ ಎಳೆಯುವ ಹಾಗೂ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಸ್ನೇಹಿ ಹೆಜ್ಜೆಯ ಭಾಗವಾಗಿ ಸರಕು ಮತ್ತು ಸೇವೆಗಳ ತೆರಿಗೆ 2024 ವಿಧೇಯಕಕ್ಕೆ ಎರಡನೇ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.
ಸರ್ಕಾರ ಹಾಗೂ ತೆರಿಗೆದಾರರ ನಡುವೆ 80,000 ವ್ಯಾಜ್ಯ ಪ್ರಕರಣಗಳಿವೆ. ಇಷ್ಟು ಪ್ರಕರಣಗಳ ಕಾರಣದಿಂದ ರೂ.15,000 ಕೋಟಿ ತಕರಾರಿನಲ್ಲಿದೆ. ಈಗಿನ ತಿದ್ದುಪಡಿಯಿಂದ ಎಲ್ಲಾ ಪ್ರಕರಣಗಳೂ ಇತ್ಯರ್ಥವಾದರೆ ಖಜಾನೆಗೆ ರೂ.15,000 ಕೋಟಿ ಹಣ ಹರಿದು ಬರುವ ಸಾಧ್ಯತೆ ಇದೆ. ಸ್ಪಿರಿಟ್ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಇದರ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಬಾರದು ಎಂದು ಜಿಎಸ್‌ಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಸ್ಪಿರಿಟ್ ಅನ್ನು ಜಿಎಸ್‌ಟಿಯಿಂದ ತೆಗೆದು ಹಾಕುತ್ತಿದ್ದೇವೆ ಎಂದು ತಿಳಿಸಿದರು.
ಬಿಬಿಎಂಪಿ ಎರಡನೇ ತಿದ್ದುಪಡಿ ವಿಧೇಯಕ ಅಂಗೀಕಾರ: 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು. 2024ರ ನವೆಂಬರ್ 30ರವರೆಗೆ ಒಟ್ಟು 4284 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಈ ಸಂಬಂಧ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದ್ದು, ಆ ಸಂಬಂಧ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕ ಇದಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದವರಿಗೆ ಒಟಿಎಸ್ ಮೂಲಕ ತೆರಿಗೆ ಬಾಕಿ ಪಾವತಿಸಲು ನವೆಂಬರ್ 30ರವರೆಗೂ ಕಾಲಾವಕಾಶ ನೀಡಲಾಗಿತ್ತು. ಈ ಮೂಲಕ ಪಾಲಿಕೆಗೆ 700 ಕೋಟಿ ಹೆಚ್ಚುವರಿಯಾಗಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. 3 ಲಕ್ಷ ಆಸ್ತಿಗಳಿಂದ 1,200 ಕೋಟಿ ಬಾಕಿ ವಸೂಲಿ ಮಾಡಲಾಗಿದೆ. ಇನ್ನೂ 2.26 ಲಕ್ಷ ಆಸ್ತಿಗಳು ಬಾಕಿ ಇವೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಮಾಹಿತಿ ನೀಡಿದರು.
ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ ಅಂಗೀಕಾರ: ವಿಧಾನಸಭೆಯಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ 2024 ಅಂಗೀಕೃತವಾಯಿತು. ಚೈನ್‌ಲಿಂಕ್, ಚಿಟ್‌ಫಂಡ್, ಪಿರಮಿಡ್ ಮಾದರಿ ಹಾಗೂ ಹಣ ಡಬ್ಲಿಂಗ್ ಮಾಡುವ ಆಮಿಷ ಒಡ್ಡಿ ಜನರಿಂದ ಹಣ ಠೇವಣಿ ಪಡೆದು ವಂಚಿಸುವ ಕಂಪೆನಿಗಳಿಗೆ ಕಡಿವಾಣ ಹಾಕುವುದು ಈ ಕಾನೂನಿನ ಮುಖ್ಯ ಉದ್ದೇಶ. ಈ ಕಾನೂನಿಗೆ ಏನೆಲ್ಲಾ ತಿದ್ದುಪಡಿ ತರಬೇಕು ಎಂದು ಅನುಭವದ ಆಧಾರದ ಮೇಲೆ ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚಿಸಿ ತಿದ್ದುಪಡಿ ತರಲಾಗಿದೆ. ಕಾನೂನಿನ ಸಮರ್ಪಕ ಅನುಷ್ಠಾನ ಹಾಗೂ ಠೇವಣಿದಾರರಿಗೆ ಸಹಾಯ ಮಾಡಿಕೊಡುವ, ಅವರ ಹಣವನ್ನು ಸುಲಭಕ್ಕೆ ಹಿಂತಿರುಗಿ ಪಡೆಯುವ ನಿಟ್ಟಿನಲ್ಲಿ ಸರಳೀಕರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ತಿದ್ದುಪಡಿಯಲ್ಲಿ ತರಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ವಿಧೇಯಕ ಮಂಡನೆ: ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ವಿಧೇಯಕವನ್ನು ಮಂಡಿಸಲಾಯಿತು. ಈ ವಿಧೇಯಕದಂತೆ ಗಣಿಗಾರಿಕೆ ಗುತ್ತಿಗೆ ಹೊಂದಿರುವವರು ಭೂಮಿಯಿಂದ ತೆಗೆಯುವ ಖನಿಜದ ಪ್ರಮಾಣವನ್ನು ಆಧರಿಸಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ಟನ್‌ಗೆ 20 ರೂಪಾಯಿಗಳಿಂದ (ಸುಣ್ಣಕ್ಕೆ) ಕಬ್ಬಿಣದ ಅದಿರಿಗೆ 100 ರೂಪಾಯಿವರೆಗೆ ತೆರಿಗೆ ಇರಲಿದೆ. ಇದರಲ್ಲಿ ಮಾಪನಾಂಕ ನಿರ್ಣಯಿಸಿದ ಉಂಡೆ ಅದಿರು (CLO), ಉಂಡೆ ಅದಿರು ಮತ್ತು ಎಲ್ಲಾ ದರ್ಜೆಗಳ ಖನಿಜಗಳು ಸೇರಿವೆ. ವಾರ್ಷಿಕವಾಗಿ ಇದರಿಂದ 4,700 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಕಿತ್ತೂರು ಕರ್ನಾಟಕಕ್ಕೂ 371ಜೆ ವಿಶೇಷ ಸ್ಥಾನಮಾನ ಕಲ್ಪಿಸಿ: ಸದನದಲ್ಲಿ ಶಾಸಕ ಕೋನರೆಡ್ಡಿ ಒತ್ತಾಯ - KITTURU KARNATAKA