ಕರ್ನಾಟಕ

karnataka

ETV Bharat / business

ಆಸ್ಟ್ರೇಲಿಯಾಗೆ ಇದೇ ಮೊದಲ ಬಾರಿಗೆ ಭಾರತದಿಂದ ದಾಳಿಂಬೆ ರಫ್ತು: ಮೆಲ್ಬೋರ್ನ್ ತಲುಪಿದ ಮೊದಲ ಶಿಪ್​ಮೆಂಟ್​ - India Exports Pomegranate

ಭಾರತವು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ದಾಳಿಂಬೆ ರಫ್ತು ಮಾಡಿದೆ.

ದಾಳಿಂಬೆ
ದಾಳಿಂಬೆ (IANS)

By ETV Bharat Karnataka Team

Published : Sep 6, 2024, 12:33 PM IST

ನವದೆಹಲಿ:ಇದೇ ಮೊದಲ ಬಾರಿಗೆ ಭಾರತದಿಂದ ಆಸ್ಟ್ರೇಲಿಯಾಗೆ ದಾಳಿಂಬೆ ರಫ್ತು ಮಾಡಲಾಗಿದೆ. ದಾಳಿಂಬೆಯ ಮೊದಲ ಶಿಪ್​ಮೆಂಟ್​ ಮುಂಬೈನಿಂದ ಹೊರಟು ಆಸ್ಟ್ರೇಲಿಯಾದ ಮೆಲ್ಬೋರ್ನ್​ಗೆ ಯಶಸ್ವಿಯಾಗಿ ತಲುಪಿದೆ ಎಂದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಗುರುವಾರ ತಿಳಿಸಿದೆ. 1.1 ಮೆಟ್ರಿಕ್ ಟನ್ (ಎಂಟಿ) ತೂಕದ ಶಿಪ್​ಮೆಂಟ್​ನಲ್ಲಿ 336 ಪೆಟ್ಟಿಗೆಗಳಷ್ಟು (ಪ್ರತಿಯೊಂದೂ 3.5 ಕೆಜಿ ತೂಕ) ದಾಳಿಂಬೆಗಳನ್ನು ಆಸ್ಟ್ರೇಲಿಯಾಗೆ ರವಾನಿಸಲಾಗಿದೆ.

ಈ ರಫ್ತು ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವುದಲ್ಲದೆ, ಹೊಸ ಆದಾಯದ ಹರಿವುಗಳನ್ನು ತೆರೆಯುವ ಮೂಲಕ ಭಾರತೀಯ ರೈತರಿಗೆ ಗಮನಾರ್ಹ ಉತ್ತೇಜನ ನೀಡಲಿದೆ ಎಪಿಇಡಿಎ ಹೇಳಿಕೆಯಲ್ಲಿ ತಿಳಿಸಿದೆ.

ರಫ್ತು ಮಾಡಲಾದ ದಾಳಿಂಬೆ ಸರಕನ್ನು ಮೆಲ್ಬೋರ್ನ್​ನ ಎಪಿಇಡಿಎ ಇಂಡಿಯಾ ಪೆವಿಲಿಯನ್​ನಲ್ಲಿನ 'ಫೈನ್ ಫುಡ್ ಆಸ್ಟ್ರೇಲಿಯಾ 2024'ನಲ್ಲಿ ಪ್ರದರ್ಶಿಸಲಾಯಿತು.

ಈ ದಾಳಿಂಬೆಗಳನ್ನು ಅಹ್ಮದ್ ನಗರದಲ್ಲಿರುವ ಆಸ್ಟ್ರೇಲಿಯಾ ಅನುಮೋದಿತ ಪ್ಯಾಕ್ ಹೌಸ್​ನಲ್ಲಿ ನಿಖರ ಮಾನದಂಡಗಳಿಗೆ ಅನುಗುಣವಾಗಿ ಪ್ಯಾಕ್ ಮಾಡಲಾಗಿತ್ತು. ಪ್ಯಾಕ್ ಮಾಡುವಾಗ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಅಗತ್ಯವಾದ ಕಠಿಣ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲಾಗಿದೆ. 2020 ರಲ್ಲಿ ಆಸ್ಟ್ರೇಲಿಯಾ ಭಾರತೀಯ ಹಣ್ಣುಗಳಿಗೆ ತನ್ನ ಮಾರುಕಟ್ಟೆಗೆ ಪ್ರವೇಶ ನೀಡಿದ ನಂತರ, ಫೆಬ್ರವರಿ 2024 ರಲ್ಲಿ ಕಾರ್ಯ ಯೋಜನೆ ಮತ್ತು ರಫ್ತು ಕಾರ್ಯವಿಧಾನಗಳನ್ನು ಅಂತಿಮಗೊಳಿಸಲಾಯಿತು ಹಾಗೂ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲಾಯಿತು.

2023-24ರ ಆರ್ಥಿಕ ವರ್ಷದಲ್ಲಿ ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಾಂಗ್ಲಾದೇಶ, ನೇಪಾಳ, ನೆದರ್ ಲ್ಯಾಂಡ್ಸ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಬಹ್ರೇನ್ ಮತ್ತು ಒಮಾನ್ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ 69.08 ಮಿಲಿಯನ್ ಡಾಲರ್ ಮೌಲ್ಯದ 72,011 ಮೆಟ್ರಿಕ್ ಟನ್ ದಾಳಿಂಬೆಯನ್ನು ರಫ್ತು ಮಾಡಿದೆ.

ಭಾರತವು ತೋಟಗಾರಿಕೆ ಬೆಳೆಗಳ ಎರಡನೇ ಅತಿದೊಡ್ಡ ಉತ್ಪಾದಕನಾಗಿದ್ದು, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಹೆಚ್ಚಾಗಿ ದಾಳಿಂಬೆ ಬೆಳೆಯಲಾಗುತ್ತದೆ.

ರಫ್ತುಗಳನ್ನು ಹೆಚ್ಚಿಸುವ ಮತ್ತು ಪೂರೈಕೆ ಸರಪಳಿ ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದ ದಾಳಿಂಬೆಗಾಗಿ ನಿರ್ದಿಷ್ಟವಾಗಿ ರಫ್ತು ಉತ್ತೇಜನ ವೇದಿಕೆಗಳನ್ನು (ಇಪಿಎಫ್) ಸ್ಥಾಪಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಎಪಿಇಡಿಎ ಹೇಳಿದೆ. ಈ ಇಪಿಎಫ್ ವೇದಿಕೆಗಳಲ್ಲಿ ವಾಣಿಜ್ಯ ಇಲಾಖೆ, ಕೃಷಿ ಇಲಾಖೆ, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಉಲ್ಲೇಖಿತ ಪ್ರಯೋಗಾಲಯಗಳು ಮತ್ತು ಅಗ್ರ ಹತ್ತು ಪ್ರಮುಖ ರಫ್ತುದಾರರ ಪ್ರತಿನಿಧಿಗಳು ಸೇರಿದ್ದಾರೆ.

ಇದನ್ನೂ ಓದಿ: 2,350 ಕೋಟಿ ರೂ. ನಷ್ಟ ದಾಖಲಿಸಿದ ಸ್ವಿಗ್ಗಿ: ಆದಾಯ ಶೇ 36ರಷ್ಟು ಏರಿಕೆ - Swiggy net loss

ABOUT THE AUTHOR

...view details