ಹೈದರಾಬಾದ್:"2047ರ ವೇಳೆಗೆ 13,000 ಡಾಲರ್ ತಲಾ ಆದಾಯ ಹೊಂದಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತ ವಾರ್ಷಿಕವಾಗಿ ಶೇ.7ರಿಂದ 8ರಷ್ಟು ಬೆಳವಣಿಗೆ ಸಾಧಿಸುವ ಅಗತ್ಯವಿದೆ" ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ.ರಂಗರಾಜನ್ ಹೇಳಿದರು. ಅಸಮಾನತೆ ಅಥವಾ ಬಡತನವನ್ನು ಕಡಿಮೆ ಮಾಡಲು ನಾವೀನ್ಯತೆ ಒಂದೇ ಪರಿಹಾರವಲ್ಲ ಎಂದು ಪ್ರತಿಪಾದಿಸಿದ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ರಂಗರಾಜನ್, "ವೇಗದ ಬೆಳವಣಿಗೆಯ ದರದ ಜೊತೆಗೆ, ದೇಶದ ಜನತೆಗೆ ನಗದು ಮತ್ತು ಮೂಲ ಆದಾಯ ಸಬ್ಸಿಡಿಗಳಂಥ ಸಾಮಾಜಿಕ ಸುರಕ್ಷತಾ ಕ್ರಮಗಳು ಬೇಕಾಗಬಹುದು" ಎಂದು ತಿಳಿಸಿದರು.
"ಶೇ.7ರಿಂದ 8ರ ನಡುವಿನ ವಾಸ್ತವಿಕ ಬೆಳವಣಿಗೆಯು ದೇಶವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಹತ್ತಿರ ಕೊಂಡೊಯ್ಯುತ್ತದೆ. ಏಕೆಂದರೆ ಅಭಿವೃದ್ಧಿ ಹೊಂದಿದ ಆರ್ಥಿಕತೆಯ ವ್ಯಾಖ್ಯಾನದ ಪ್ರಕಾರ ತಲಾ ಆದಾಯ 13,000 ಡಾಲರ್ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕಾಗುತ್ತದೆ. ಭಾರತದ ತಲಾ ಆದಾಯ ಈಗ 2,700 ಡಾಲರ್ ಆಗಿದೆ. ಇದರರ್ಥ ತಲಾ ಆದಾಯವು ಐದು ಪಟ್ಟು ಹೆಚ್ಚಾಗಬೇಕಾಗುತ್ತದೆ" ಎಂದು ಅವರು ವಿವರಿಸಿದರು.
"ವಿನಿಮಯ ದರವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಂಡರೆ ಅಥವಾ ಬೆಲೆಗಳು ಹೆಚ್ಚಾದರೆ ನಾಮಮಾತ್ರ ಆದಾಯ ಹೆಚ್ಚಾಗುತ್ತದೆ. ಆಗ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬಹುದು. ಆದ್ದರಿಂದ, ಭಾರತೀಯ ಆರ್ಥಿಕತೆಯ ಡಾಲರ್ ಮೌಲ್ಯದ ಲೆಕ್ಕಾಚಾರವು ನಿಜವಾದ ಬೆಳವಣಿಗೆ, ಹಣದುಬ್ಬರದ ಮಟ್ಟ ಮತ್ತು ವಿನಿಮಯ ದರವನ್ನು ಅವಲಂಬಿಸಿರುತ್ತದೆ" ಎಂದರು.