ಸಿಯೋಲ್ : ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ ಮತ್ತು ಅದರ ಅಂಗಸಂಸ್ಥೆ ಕಿಯಾ ಕಳೆದ ಡಿಸೆಂಬರ್ ವೇಳೆಗೆ 1.5 ಮಿಲಿಯನ್ಗೂ (15 ಲಕ್ಷ) ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿವೆ. ಹ್ಯುಂಡೈ ತನ್ನ ಮೊದಲ ಇವಿ ಮಾದರಿಯನ್ನು ಪರಿಚಯಿಸಿದ 12 ವರ್ಷಗಳ ನಂತರ ಕಂಪನಿ ಈ ಮೈಲಿಗಲ್ಲು ದಾಟಿದೆ. ಹ್ಯುಂಡೈ ತನ್ನ ಮೊದಲ ಇವಿ ಮಾಡೆಲ್ ಬ್ಲೂಆನ್ (BlueOn) ಅನ್ನು ಜುಲೈ 2011 ರಲ್ಲಿ ಸ್ಥಳೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಹ್ಯುಂಡೈ ಮತ್ತು ಕಿಯಾ ಒಟ್ಟಾಗಿ 2023 ರಲ್ಲಿ 5,16,441 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಅಂತ್ಯದ ವೇಳೆಗೆ ಇವುಗಳ ಒಟ್ಟು ಇವಿ ಮಾರಾಟ 1.53 ಮಿಲಿಯನ್ ಯುನಿಟ್ಗಳಿಗೆ ತಲುಪಿದೆ ಎಂದು ಕಂಪನಿಗಳ ಡೇಟಾ ತೋರಿಸಿದೆ.
ಹ್ಯುಂಡೈ ಮತ್ತು ಕಿಯಾಗಳ 10 ಎಲೆಕ್ಟ್ರಿಕ್ ವಾಹನ ಮಾಡೆಲ್ಗಳ ಪೈಕಿ 8 ಕಳೆದ ವರ್ಷ ವಿದೇಶದಲ್ಲಿ ಮಾರಾಟವಾಗಿವೆ. ಹೆಚ್ಚು ಮಾರಾಟವಾದ ಮಾದರಿಗಳಲ್ಲಿ ಹ್ಯುಂಡೈನ ಕೋನಾ ಎಲೆಕ್ಟ್ರಿಕ್ ಮತ್ತು ಐಯಾನಿಕ್ 5, ಮತ್ತು ಕಿಯಾದ ನಿರೋ ಮತ್ತು ಇವಿ 6 ಸೇರಿವೆ.
ಇವಿ ಮಾರಾಟದಲ್ಲಿ ನಿಧಾನಗತಿಯ ಹೊರತಾಗಿಯೂ, ಹ್ಯುಂಡೈ ಈ ವರ್ಷದ ಕೊನೆಯಲ್ಲಿ ಕ್ಯಾಸ್ಪರ್ ಮಿನಿ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸಿದೆ ಮತ್ತು ಕಿಯಾ ಎರಡನೇ ತ್ರೈಮಾಸಿಕದಲ್ಲಿ ತನ್ನ ಸ್ಥಳೀಯ ಕಾರ್ಖಾನೆಯಲ್ಲಿ ಇವಿ 3 ಕಾಂಪ್ಯಾಕ್ಟ್ ಇವಿ ಮಾಡೆಲ್ಗಳ ಉತ್ಪಾದನೆಯನ್ನು ಪ್ರಾರಂಭಿಸಲಿದೆ.
2024 ರಲ್ಲಿ, ಹ್ಯುಂಡೈ 4.24 ಮಿಲಿಯನ್ ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದು, ಇದು ಕಳೆದ ವರ್ಷ ಮಾರಾಟವಾಗಿದ್ದ 4.21 ಮಿಲಿಯನ್ ಗಿಂತ ಸ್ವಲ್ಪ ಹೆಚ್ಚಾಗಿದೆ ಮತ್ತು ಕಿಯಾ 3.2 ಮಿಲಿಯನ್ ಯುನಿಟ್ ಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದು ಇದು ಕಳೆದ ವರ್ಷ ಮಾರಾಟವಾಗಿದ್ದ 3.08 ಮಿಲಿಯನ್ಗಿಂತ ಶೇಕಡಾ 3.6 ಹೆಚ್ಚಾಗಿದೆ. ಒಂದು ಹಣಕಾಸು ವರ್ಷದಲ್ಲಿ ಹ್ಯುಂಡೈ ಅರ್ಧ ಮಿಲಿಯನ್ ಮೈಲಿಗಲ್ಲನ್ನು ದಾಟಿರುವುದು ಇದು ಎರಡನೇ ಬಾರಿಯಾಗಿದೆ.
ಹ್ಯುಂಡೈ ಮೋಟಾರ್ ಮತ್ತು ಕಿಯಾ ಒಟ್ಟಾಗಿ ಟೊಯೊಟಾ ಮೋಟಾರ್ ಕಾರ್ಪ್ ಮತ್ತು ಫೋಕ್ಸ್ ವ್ಯಾಗನ್ ಗ್ರೂಪ್ ನಂತರ ಮಾರಾಟದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ.
ಇದನ್ನೂ ಓದಿ : ಜನವರಿಯಲ್ಲಿ $732 ಮಿಲಿಯನ್ ಫಂಡಿಂಗ್ ಸಂಗ್ರಹಿಸಿದ ಭಾರತೀಯ ಸ್ಟಾರ್ಟಪ್ಗಳು