ಇಂದಿನ ದಿನಗಳಲ್ಲಿ ಎಲ್ಲ ರೀತಿಯ ಹಣಕಾಸು, ಆರ್ಥಿಕತೆಗೆ ಸಂಬಂಧಿಸಿದ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ (PAN Card) ಕಡ್ಡಾಯ. ಆದರೆ, ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಕಾರಣ ಪ್ಯಾನ್ ಕಾರ್ಡ್ ಕೂಡ ದುರ್ಬಳಕೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಒಳಿತು.
ಪ್ಯಾನ್ ಸಂಖ್ಯೆ ಎಂದರೇನು?: ಪ್ಯಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ 10 ಅಂಕಿಯ ಆಲ್ಫಾನ್ಯೂಮರಿಕ್ ವಿಶಿಷ್ಟವಾದ ಗುರುತಿನ ಚೀಟಿ. ಪ್ಯಾನ್ ಎಂದರೆ, ಆದಾಯ ತೆರಿಗೆ ಇಲಾಖೆಯ ಶಾಶ್ವತ ಖಾತೆ ಸಂಖ್ಯೆ (Permanent Account Number-PAN). ಇದನ್ನು ಐಟಿ ಇಲಾಖೆಯು ಲ್ಯಾಮಿನೇಟೆಡ್ ಕಾರ್ಡ್ ರೂಪದಲ್ಲಿ ನೀಡುತ್ತದೆ. ತೆರಿಗೆ ಉದ್ದೇಶಗಳಿಗಾಗಿ ದೇಶದ ಪ್ರಜೆಗಳು ಮತ್ತು ಸಂಸ್ಥೆಗಳಿಗೆ ಪ್ಯಾನ್ ಕಾರ್ಡ್ ವಿಶಿಷ್ಟ ಗುರುತಿನ ಸಂಖ್ಯೆಯಾಗಿ ಕಾರ್ಯನಿರ್ವಹಿಸುತ್ತದೆ.
ಆದರೆ, ಕೆಲವು ಪ್ರಮುಖ ಕೆಲಸ-ಕಾರ್ಯಗಳಿಗೆ ಪ್ಯಾನ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ನೀಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚು. ಹಾಗಾದರೆ, ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಹೇಗೆ ಎಂಬುವುದು ತಿಳಿಯೋಣ.
ಪ್ಯಾನ್ ಕಾರ್ಡ್ ದುರುಪಯೋಗವಾಗುತ್ತಿದೆಯೇ ಎಂದು ತಿಳಿಯಲು ಸುಲಭ ವಿಧಾನವೆಂದರೆ, ನಿಮ್ಮ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಖಾತೆಗಳನ್ನು ಆಗಾಗ ಪರಿಶೀಲಿಸುವುದು. ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ರಸೀದಿಗಳನ್ನು ಪರಿಶೀಲನೆ ಮಾಡಿ. ಬೇರೆ ಯಾವುದನ್ನು ಪರಿಶೀಲಿಸಬೇಕು?
ಹಣಕಾಸು ಸ್ಟೇಟ್‌ಮೆಂಟ್‌ಗಳು:ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪರಿಶೀಲಿಸುವುದು ಒಳ್ಳೆಯದು. ಅವುಗಳಲ್ಲಿ ಯಾವುದಾದರೂ ಅನುಮಾನಾಸ್ಪದ ಅಥವಾ ಅನಧಿಕೃತ ಹಣಕಾಸು ವಹಿವಾಟು ನಡೆದಿದೆಯೇ ಎಂಬುದನ್ನು ಗಮನಿಸಿದೆ.
ಸಿ-ಬಿಲ್: ಕ್ರೆಡಿಟ್ ಬ್ಯೂರೋಗಳಿಂದ ನಿಮ್ಮ ಕ್ರೆಡಿಟ್ ವರದಿಯ ನಕಲು ಪ್ರತಿಗಳನ್ನು ಪಡೆಯಿರಿ. ನಿಮ್ಮ ಪ್ಯಾನ್ ಕಾರ್ಡ್‌ಗೆ ಯಾವುದೇ ನಕಲಿ ಖಾತೆಗಳು ಅಥವಾ ಕ್ರೆಡಿಟ್ ಅಪ್ಲಿಕೇಶನ್‌ಗಳನ್ನು ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ. ಒಂದು ಅಕ್ರಮ ಲಿಂಕ್ ಆಗಿದ್ದಲ್ಲಿ ಅದನ್ನು ತಕ್ಷಣವೇ ಕ್ರೆಡಿಟ್ ಬ್ಯೂರೋಗೆ ವರದಿ ಮಾಡಿ.