ನ್ಯೂಯಾರ್ಕ್, ಅಮೆರಿಕ: ಗೂಗಲ್ ಮಾತೃಸಂಸ್ಥೆಯ ಇಬ್ಬರು ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರ ಹೆಸರುಗಳು ಈಗ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿವೆ. ಇದು ನಿಮಗೆಲ್ಲ ಗೊತ್ತೇ ಇದೆ. ಅಚ್ಚರಿಯ ವಿಷಯ ಎಂದರೆ, ಕಂಪನಿ ಸಿಇಒ ಸುಂದರ್ ಪಿಚೈ ಕೂಡಾ ಈಗ ಕೋಟ್ಯಧಿಪತಿಯಾಗಲು ಹೊರಟಿದ್ದಾರೆ. ಅಂದರೆ ಅವರ ನಿವ್ವಳ ಮೌಲ್ಯ ಸುಮಾರು 100 ಕೋಟಿ ಡಾಲರ್ಗೆ ಏರಿಕೆ ಅಗಿದೆ. ಹೀಗಂತಾ 'ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್' ಬಹಿರಂಗಪಡಿಸಿದೆ.
ಸುಂದರ್ ಸುಂದರ ಸಾಧನೆ: ಕಂಪನಿಯ ಷೇರು ಬೆಲೆಗಳು ಏರಿಕೆ ಆದಾಗ ಸಾಮಾನ್ಯವಾಗಿ, ಕಂಪನಿಗಳ ಸಂಸ್ಥಾಪಕರ ಸಂಪತ್ತು ದ್ವಿಗುಣ ಇಲ್ಲವೇ ಬಾರಿ ಏರಿಕೆಗೆ ಕಾರಣವಾಗುತ್ತದೆ. ಇದು ಸಹಜ ಪ್ರಕ್ರಿಯೆ ಕೂಡಾ ಆಗಿದೆ. ಆದರೆ ಸಾಮಾನ್ಯ ಉದ್ಯೋಗಿಯಂತೆ ಗೂಗಲ್ ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಸೇರಿಕೊಂಡ ಸುಂದರ್ ಪಿಚೈ ಅಸಾಧಾರಣ ಎತ್ತರಕ್ಕೆ ಏರಿದ್ದಾರೆ. ಅವರು ಗೂಗಲ್ ಕಂಪನಿಯಿಂದ ನಿಯೋಜಿಸಲಾದ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಕಂಪನಿಯಲ್ಲಿ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಾ ಸಾಗಿದ್ದಾರೆ. ಗೂಗಲ್ ಕ್ರೋಮ್ ಮತ್ತು ಗೂಗಲ್ ಟೂಲ್ ಬಾರ್‌ಗಳನ್ನು ಅಭಿವೃದ್ಧಿಪಡಿಸಿ ನೆಟಿಜನ್‌ಗಳ ಗಮನ ಸೆಳೆದ ಕೀರ್ತಿ ಸುಂದರ್ ಅವರಿಗೆ ಸಲ್ಲುತ್ತದೆ. ಗೂಗಲ್ ಮಾಲೀಕರು ಸುಂದರ್ ಪಿಚೈ ಅವರ ಈ ಸಾಧನೆಯನ್ನು ಗುರುತಿಸಿದ್ದಲ್ಲದೇ ಒಪ್ಪಿಕೊಂಡಿದ್ದಾರೆ.
ಹಾಗಾಗಿಯೇ ಸುಂದರ್ ಪಿಚೈ ಅವರಿಗೆ ಸಿಇಒ ಸ್ಥಾನವೂ ಸುಲಭವಾಗಿ ಒಲಿದು ಬಂದಿತ್ತು. ಇನ್ನು ಸಾಮಾನ್ಯ ಪ್ರಾಡಕ್ಟ್ ಮ್ಯಾನೇಜರ್ ಕಂಪನಿ ಸಿಇಒ ಆಗಿದ್ದು, ಬಹಳಷ್ಟು ಜನರನ್ನು ನಿಬ್ಬೆರಗಾಗಿಸಿದ್ದು ಕೂಡಾ ಸುಳ್ಳಲ್ಲ. 2015 ರಲ್ಲಿ ಗೂಗಲ್‌ನಲ್ಲಿ ಈ ಸ್ಥಾನವನ್ನು ಪಡೆದ ಸುಂದರ್, ಕಳೆದ ಒಂಬತ್ತು ವರ್ಷಗಳಲ್ಲಿ ಸಂಬಳ, ಇತರ ಭತ್ಯೆಗಳು ಮತ್ತು ಸವಲತ್ತುಗಳ ರೂಪದಲ್ಲಿ ಭಾರಿ ಮೊತ್ತದ ಸಂಬಳವನ್ನ ಅಂದರೆ ಆದಾಯವನ್ನೇ ಗಳಿಸಿಕೊಂಡಿದ್ದಾರೆ. ಅವರಿಗೆ ಮಂಜೂರಾಗಿದ್ದ ‘ಆಲ್ಫಾಬೆಟ್ ಕಂಪನಿ’ಯ ಷೇರುಗಳ ಬೆಲೆ ಕಳೆದ ಒಂಬತ್ತು ವರ್ಷಗಳಲ್ಲಿ ಭಾರಿ ಏರಿಕೆ ಕಂಡಿದೆ. ಆ ಮಟ್ಟದಲ್ಲಿ ಸುಂದರ್ ಅವರು ಗೂಗಲ್ ನ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಲು ವ್ಯಾಪಾರ ಉತ್ಪನ್ನಗಳನ್ನು ಲಭ್ಯವಾಗುವಂತೆ ಮಾಡಿ ಗಮನ ಸೆಳೆದಿದ್ದಾರೆ.