ಹೈದರಾಬಾದ್: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ - EPFO ಉದ್ಯೋಗಿಗಳ ಭವಿಷ್ಯದ ಆರ್ಥಿಕ ಭದ್ರತೆಗಾಗಿ 'ನೌಕರರ ಪಿಂಚಣಿ ಯೋಜನೆ'- EPS ಅನ್ನು ಒದಗಿಸುತ್ತದೆ. ಈ ಯೋಜನೆಯ ಮೂಲಕ ನಿವೃತ್ತಿಯ ನಂತರ ಪಿಂಚಣಿ ಪಡೆಯಬಹುದು. ನೀವು ಬಯಸಿದರೆ ನೀವು ಆರಂಭಿಕ ಪಿಂಚಣಿ ವ್ಯವಸ್ಥೆಯನ್ನೂ ಮಾಡಬಹುದು. ಇಲ್ಲದಿದ್ದರೆ ಸ್ವಲ್ಪ ತಡವಾಗಿ ಕ್ಲೈಮ್ ಮಾಡಿ ಹೆಚ್ಚಿನ ಮೊತ್ತದ ಪಿಂಚಣಿ ಪಡೆಯಬಹುದು.
10 ವರ್ಷಗಳ ಸೇವೆ ಕಡ್ಡಾಯ: ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಖಾತೆದಾರರು ಪಿಂಚಣಿಗೆ ಅರ್ಹರಾಗಿರುತ್ತಾರೆ. 10 ವರ್ಷಗಳವರೆಗೆ ಹಣಪಾವತಿಸಿದ ನೌಕರರು 58 ವರ್ಷವನ್ನು ತಲುಪಿದ ನಂತರ ಪಿಂಚಣಿ ಪಡೆದುಕೊಳ್ಳಬಹುದು. ಆದರೆ, ನಿವೃತ್ತ ನೌಕರರು 58 ವರ್ಷವಾದ ತಕ್ಷಣ ಪಿಂಚಣಿ ಪಡೆಯುವ ಬದಲು 60 ವರ್ಷ ವಯಸ್ಸಿನವರೆಗೆ ಕಾಯುವ ಸಾಮರ್ಥ್ಯ ಹೊಂದಿದ್ದರೆ, ಅವರ ವಾರ್ಷಿಕ ಪಿಂಚಣಿ ಶೇಕಡಾ 8 ರಷ್ಟು ಹೆಚ್ಚಾಗುತ್ತದೆ. ಅಂದರೆ ಹೆಚ್ಚು ಆರ್ಥಿಕ ಭದ್ರತೆ ಅವರಿಗೆ ಸಿಗಲಿದೆ.
ಆರಂಭಿಕ ಪಿಂಚಣಿ: ನನಗೆ 58 ವರ್ಷ ಕಾಯಲು ಆಗುವುದಿಲ್ಲ, 50ನೇ ವಯಸ್ಸಿನಲ್ಲೇ ಪಿಂಚಣಿ ಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಅಂತಹ ಅವಕಾಶವೂ ಇದೆ. ಉದ್ಯೋಗಿಗಳು ಬಯಸಿದಲ್ಲಿ 50 ವರ್ಷ ವಯಸ್ಸಿನಿಂದ ಪಿಂಚಣಿ ಪಡೆಯಬಹುದು. ಆದರೆ, ನೀವು ಈ ಆರಂಭಿಕ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದೇ ಆದರೆ, ನಿಮಗೆ ಕಡಿಮೆ ಪಿಂಚಣಿ ಬರಲಿದೆ. ಅಲ್ಲದೇ ನೀವು ಪಿಎಫ್‌ಗೆ ನಿಮ್ಮ ಮೂಲ ವೇತನದ ಶೇಕಡಾ 12 ಕ್ಕಿಂತ ಹೆಚ್ಚು ಕೊಡುಗೆ ನೀಡಬೇಕು. ಆದರೆ, ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಗಮನಿಸಬೇಕಾಗುತ್ತದೆ. ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ಶೇಕಡಾ 12 ಕ್ಕಿಂತ ಹೆಚ್ಚು ಕೊಡುಗೆ ನೀಡಿದರೆ, ಕಂಪನಿಗಳು ಕೇವಲ 12 ಪ್ರತಿಶತದವರೆಗೆ ಕೊಡುಗೆ ಮಾತ್ರ ನೀಡುತ್ತವೆ. ನಿಯಮಗಳ ಪ್ರಕಾರ, ಕಂಪನಿಗಳು ಅಥವಾ ಉದ್ಯೋಗದಾತರು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಬೇಕಾಗಿಲ್ಲ. ಉದ್ಯೋಗಿ ಪಿಂಚಣಿ ಯೋಜನೆ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ 8.33 ಪ್ರತಿಶತವನ್ನು 'ನೌಕರ ಪಿಂಚಣಿ ಯೋಜನೆ' ಇಪಿಎಸ್ ಗಾಗಿ ಮೀಸಲಿಡಲಾಗಿದೆ. ಇದು ನಿವೃತ್ತಿಯ ನಂತರ ಉದ್ಯೋಗಿಗೆ ಪಿಂಚಣಿ ಪ್ರಯೋಜನಗಳನ್ನು ಒದಗಿಸುತ್ತದೆ.