ಬೆಳಗಾವಿ : ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ದಾರೆ. ಹುಕ್ಕೇರಿ ತಾಲೂಕಿನ ಸುಲ್ತಾನಪುರದ ಐದು ವರ್ಷದ ಗಂಡು ಮಗು ಮಾರಾಟ ಪ್ರಕರಣ ಭೇದಿಸುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದು, ಮಹಾರಾಷ್ಟ್ರದ ಮೂವರು ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.
ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲೂಕಿನ ಮಾದ್ಯಾಳದ ಸಂಗೀತಾ ಹಮ್ಮನ್ನವರ, ರತ್ನಾಗಿರಿ ಜಿಲ್ಲೆಯ ಚಿಪಳುನ ತಾಲೂಕಿನ ನಿವಳಿಯ ಮೋಹನ ತಾವಡೆ ಮತ್ತು ಆತನ ಪತ್ನಿ ಸಂಗೀತಾ ತಾವಡೆ ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳಾದ ನಂದಕುಮಾರ ಸೀತಾರಾಮ್ ಡೋರಲೇಕರ್ ಮತ್ತು ಆತನ ಪತ್ನಿ ನಂದಿನಿ ನಂದಕುಮಾರ ಡೋರಲೇಕರ್ ಪತ್ತೆಗೆ ಶೋಧ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ. ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.
ಪ್ರಕರಣದ ಬಗ್ಗೆ ಎಸ್ಪಿ ಪ್ರತಿಕ್ರಿಯೆ: ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಸುಲ್ತಾನಪುರದ ಅರ್ಚನಾ ಮಗದುಮ್ಮ ಹಾಗೂ ರಾಜು ಮಗದುಮ್ಮ ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಅರ್ಚನಾ ಅವರಿಗೆ ಈ ಹಿಂದೆ ಜನಿಸಿದ್ದ ಮಗುವಿನ ಆರೋಗ್ಯ ಸರಿ ಇರಲಿಲ್ಲ. ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಸಂಗೀತಾ ಹಮ್ಮನ್ನವರ ಆ ಮಗುವನ್ನು ಕರೆದೊಯ್ದು, ಮೋಹನ ತಾವಡೆ, ಸಂಗೀತಾ ತಾವಡೆ ಮೂಲಕ ರತ್ನಗಿರಿ ಜಿಲ್ಲೆಯ ನಂದಕುಮಾರ ಮತ್ತು ನಂದಿನಿ ಡೋರಲೇಕರ ದಂಪತಿಗೆ 3.50 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ಮಗುವಿನ ತಾಯಿ ಜನವರಿ 20ರಂದು ದಾಖಲಿಸಿದ ದೂರು ಆಧರಿಸಿ ತನಿಖೆ ಕೈಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.
ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು: ಪೊಲೀಸ್ ಇನ್‌ಸ್ಪೆಕ್ಟರ್ ಎಂ. ಕೆ ಬಸಾಪುರ ನೇತೃತ್ವದ ತಂಡವು ಮೂವರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳನ್ನು ಬಂಧಿಸಬೇಕಿದೆ. ಇತ್ತೀಚಿಗೆ ಸುಲ್ತಾನಪುರದಲ್ಲೇ ನಾಲ್ಕು ವರ್ಷದ ಮಗು ಮಾರಾಟ ಪ್ರಕರಣ ಭೇದಿಸಲಾಗಿತ್ತು. ಈಗಿನ ಪ್ರಕರಣಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಪಂದನಾ ಸಂಸ್ಥೆಯವರು ಹೇಳಿದ್ದಿಷ್ಟು: ಸ್ಪಂದನಾ ಸಂಸ್ಥೆಯ ಸುಶೀಲಾ ಅವರು ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಇದು 3ನೇ ಮಗು ಮಾರಾಟ ಪ್ರಕರಣವಾಗಿದ್ದು, ಇದರ ಹಿಂದೆ ದೊಡ್ಡ ಜಾಲವಿದೆ. ಇಂಥ ಘಟನೆಗಳ ಬಗ್ಗೆ ಮಾಹಿತಿ ಬಂದ ತಕ್ಷಣ ಸಾರ್ವಜನಿಕರು ಪೊಲೀಸರಿಗೆ ತಿಳಿಸಿ ಮಗುವನ್ನು ರಕ್ಷಿಸುವ ಕೆಲಸ ಮಾಡಬೇಕು. ಅಲ್ಲದೇ ಈ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ನಾಲ್ಕು ಲಕ್ಷಕ್ಕೆ ಬಾಲಕನನ್ನು ಮಾರಾಟ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ: ಎಸ್ಪಿ ಹೇಳಿದ್ದೇನು? - CHILD SELLING CASE