ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಜಾರಿ ಮಾಡಿರುವ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಅರ್ಜಿಗಳ ತುರ್ತು ವಿಚಾರಣೆಗೆ ಪರಿಗಣಿಸುವಂತೆ ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರಾದ ವಿಕ್ರಮ್ ಹುಯ್ಲಗೋಳ ಅವರು ಪ್ರಸ್ತಾಪಿಸಿದರು. ವಾದ ಆಲಿಸಿದ ಪೀಠ, ಇಂದು ಸಂಜೆ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿತು.
ಅರ್ಜಿಯ ವಿವರ : ಅರ್ಜಿದಾರರು ಹಿರಿಯ ನಾಗರೀಕರಾಗಿದ್ದು, ಮೈಸೂರಿನ ಕೆಸರೆ ಗ್ರಾಮದಲ್ಲಿ ಸರ್ವೇ ಸಂಖ್ಯೆ 464ರಲ್ಲಿ ತುಂಡು ಭೂಮಿಯೊಂದನ್ನು ನನ್ನ ಸಹೋದರ ಖರೀದಿಸಿದ್ದರು. ಬಳಿಕ ತನಗೆ 2010ರಲ್ಲಿ ಅರಿಶಿಣ- ಕುಂಕುಮ ನೀಡುವ ಸಲುವಾಗಿ ದಾನವಾಗಿ ನೀಡಿದ್ದರು. ಈ ಜಮೀನು ಸ್ವಾಧೀನವಾಗಿ ಡಿನೋಟಿಫಿಕೇಷನ್ ಮಾಡಲಾಗಿದ್ದು, ಮುಡಾ ಅಭಿವೃದ್ಧಿಪಡಿಸಿತ್ತು. ಇದಕ್ಕಾಗಿ ಪರಿಹಾರ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಬಳಿಕ ಜನವತಿ ಪ್ರದೇಶಗಳಲ್ಲಿ ಬದಲಿ ನಿವೇಶನವನ್ನು ಮಂಜೂರು ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್‌ಗೆ ಇ.ಡಿ ನೋಟಿಸ್
ಇದಾದ ನಂತರ 2024ರ ಅಕ್ಟೋಬರ್ ತಿಂಗಳಲ್ಲಿ ಆ ಬದಲಿ ನಿವೇಶನಗಳನ್ನು ಬಿಟ್ಟುಕೊಡಲಾಗಿದೆ. ಹೀಗಿದ್ದರೂ ತನಗೆ ಸಂಬಂಧವಿಲ್ಲದ ದೂರಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳಿಲ್ಲದಿದ್ದರೂ, ಹಣಕಾಸಿನ ದುರ್ಬಳಕೆ ಇಲ್ಲದಿದ್ದರೂ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಇದು ಕಾನೂನುಬಾಹಿರ ಹಾಗೂ ಆದಾರ ರಹಿತವಾಗಿದೆ. ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ. ಅಲ್ಲದೆ, ತನ್ನ ಪತಿಯ (ಸಿಎಂ ಸಿದ್ದರಾಮಯ್ಯ) ವಿರುದ್ಧ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವುದಕ್ಕಾಗಿ ಈ ರೀತಿಯ ದೂರುಗಳು ದಾಖಲಾಗುತ್ತಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸಚಿವ ಭೈರತಿ ಸುರೇಶ್ ಅರ್ಜಿ : ಅಲ್ಲದೆ, ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದಿದ್ದರೂ, ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದು, ಸಮನ್ಸ್ ಜಾರಿ ಮಾಡಲಾಗಿದೆ. ಆದ್ದರಿಂದ ಸಮನ್ಸ್ ರದ್ದು ಮಾಡಬೇಕು ಎಂದು ಸಚಿವ ಭೈರತಿ ಸುರೇಶ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣ: ಹೈಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದ ಲೋಕಾಯುಕ್ತ ಅಧಿಕಾರಿಗಳು!