ನವದೆಹಲಿ: ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ದ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿ ಫೆಬ್ರವರಿ 28ಕ್ಕೆ ಕೊನೆಗೊಳ್ಳಲಿದ್ದು, ಕೇಂದ್ರ ಹಣಕಾಸು ಸಚಿವಾಲಯವು ನೂತನ ಅಧ್ಯಕ್ಷರಿಗಾಗಿ ಹುಡುಕಾಟವನ್ನು ಆರಂಭಿಸಿದೆ. ಹೊಸ ಅಧ್ಯಕ್ಷರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ಸೆಬಿ, ಈ ಕುರಿತು ಪತ್ರಿಕೆಗಳಲ್ಲಿ ಸೋಮವಾರ ಜಾಹೀರಾತು ಪ್ರಕಟಿಸಿದೆ.
'ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾದ ಅಧ್ಯಕ್ಷರ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನ' ಎಂಬ ಶೀರ್ಷಿಕೆಯ ಜಾಹೀರಾತಿನಲ್ಲಿ ಸೆಬಿ ಅಧ್ಯಕ್ಷರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. "ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಗರಿಷ್ಠ ಐದು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ನೇಮಕಾತಿಯು ಜಾರಿಯಲ್ಲಿರುತ್ತದೆ" ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ಸೆಬಿ ಮುಖ್ಯಸ್ಥರಿಗೆ ಭಾರತ ಸರ್ಕಾರದ ಕಾರ್ಯದರ್ಶಿಗೆ ಸರಿ ಸಮನಾದ ವೇತನವನ್ನು ನೀಡಲಾಗುತ್ತದೆ ಅಥವಾ ಮನೆ ಮತ್ತು ಕಾರು ಸೌಲಭ್ಯಗಳಿಲ್ಲದೆ ತಿಂಗಳಿಗೆ 5,62,500 ರೂ.ಗಳ ಏಕೀಕೃತ ವೇತನವನ್ನು ಅವರು ಪಡೆಯಬಹುದು. ಫೆಬ್ರವರಿ 17ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಹಣಕಾಸು ಸಚಿವಾಲಯವು ಗಡುವನ್ನು ನಿಗದಿಪಡಿಸಿದೆ.
ಮಾರ್ಚ್ 2022 ರಲ್ಲಿ ಸೆಬಿ ಮುಖ್ಯಸ್ಥರಾಗಿ ನೇಮಕಗೊಂಡ ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿ ಇದೇ ಫೆಬ್ರವರಿ 28 ರಂದು ಕೊನೆಗೊಳ್ಳಲಿದೆ. ಮಾಧಬಿ ಸೆಬಿಯ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. ಸೆಬಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಅವರು ಸೆಬಿ ಮಂಡಳಿಯ ಸಾಮಾನ್ಯ ಸದಸ್ಯರಾಗಿದ್ದರು.
ಸೆಬಿ ಮುಖ್ಯಸ್ಥರಾಗಿದ್ದ ಮಾಜಿ ಐಎಎಸ್ ಅಧಿಕಾರಿ ಅಜಯ್ ತ್ಯಾಗಿ ಅವರ ಅಧಿಕಾರಾವಧಿ ಎರಡು ವರ್ಷಗಳ ವಿಸ್ತರಣೆಯ ನಂತರ ಕೊನೆಗೊಂಡಿತ್ತು. ಇವರ ನಂತರ ಮಾಧಬಿ ಅಧಿಕಾರ ವಹಿಸಿಕೊಂಡಿದ್ದರು.
ಮಾಧಬಿ ಸೆಬಿ ಮುಖ್ಯಸ್ಥರಾದ ಖಾಸಗಿ ವಲಯದ ಮೊದಲ ವ್ಯಕ್ತಿಯಾಗಿದ್ದಾರೆ. ಅವರ ವೃತ್ತಿಜೀವನವು 1989 ರಲ್ಲಿ ಐಸಿಐಸಿಐ ಬ್ಯಾಂಕಿನಲ್ಲಿ ಪ್ರಾರಂಭವಾಯಿತು. 1993 ಮತ್ತು 1995 ರ ನಡುವೆ, ಬುಚ್ ಇಂಗ್ಲೆಂಡ್ನ ವೆಸ್ಟ್ ಚೆಷೈರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ಅವರು ಮಾರಾಟ, ಮಾರ್ಕೆಟಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ಸೇರಿದಂತೆ 12 ವರ್ಷಗಳ ಕಾಲ ಹಲವಾರು ಕಂಪನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು.
ಅವರು 2006 ರಲ್ಲಿ ಐಸಿಐಸಿಐ ಸೆಕ್ಯುರಿಟೀಸ್ಗೆ ಸೇರಿದರು ಮತ್ತು ನಂತರ ಫೆಬ್ರವರಿ 2009 ರಿಂದ ಮೇ 2011 ರವರೆಗೆ ಆ ಕಂಪನಿಯ ಸಿಇಒ ಆಗಿ ಸೇವೆ ಸಲ್ಲಿಸಿದರು. ಇದರ ನಂತರ, ಬುಚ್ 2011 ರಲ್ಲಿ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ಗೆ ಸೇರಲು ಸಿಂಗಾಪುರಕ್ಕೆ ತೆರಳಿದರು. 2011 ಮತ್ತು 2017 ರ ನಡುವೆ ಅವರು ಜೆನ್ಸರ್ ಟೆಕ್ನಾಲಜೀಸ್, ಇನ್ನೋವೆನ್ ಕ್ಯಾಪಿಟಲ್ ಮತ್ತು ಮ್ಯಾಕ್ಸ್ ಹೆಲ್ತ್ ಕೇರ್ನಂತಹ ಅನೇಕ ಕಂಪನಿಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡಿದರು.