ಹೈದರಾಬಾದ್:ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ವರದಿಯ ಪ್ರಕಾರ, ಎಲೋನ್ ಮಸ್ಕ್ 208 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ 205 ಬಿಲಿಯನ್ ಡಾಲರ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಬರ್ನಾರ್ಡ್ ಅರ್ನಾಲ್ಡ್ 199 ಬಿಲಿಯನ್ ಡಾಲರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ವಾಸ್ತವವಾಗಿ, ಈ ಮೂವರ ನಡುವೆ ಬಹಳ ಸಮಯದಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದಾಗ್ಯೂ, ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಏರಿಕೆ ಕಂಡ ಹಿನ್ನೆಲೆಯಲ್ಲಿ ಮಸ್ಕ್ ಅವರ ಸಂಪತ್ತು ಅಗಾಧವಾಗಿ ಹೆಚ್ಚಾಗಿದೆ. ಇದರೊಂದಿಗೆ ಜೆಫ್ ಬೆಜೋಸ್ ಅವರನ್ನು ಹಿಂದಕ್ಕೆ ತಳ್ಳಿ ಮೊದಲ ಸ್ಥಾನವನ್ನು ಮರಳಿ ಪಡೆದುಕೊಳ್ಳುವಲ್ಲಿ ಎಲೋನ್ ಯಶಸ್ವಿಯಾಗಿದ್ದಾರೆ. ಟೆಸ್ಲಾದ ಇತ್ತೀಚಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಹೂಡಿಕೆದಾರರು ಎಲೋನ್ ಮಸ್ಕ್‌ಗೆ $56 ಬಿಲಿಯನ್ ವೇತನ ಪ್ಯಾಕೇಜ್ ನೀಡಲು ಒಪ್ಪಿಕೊಂಡಿದ್ದರು. ಇದರೊಂದಿಗೆ ಅವರ ಕಂಪನಿಯ ಷೇರುಗಳು ಭಾರಿ ಲಾಭ ಗಳಿಸಿದ್ದವು.
ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ:ಬ್ಲೂಮ್‌ಬರ್ಗ್ ಇಂಡೆಕ್ಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಮುಖೇಶ್ ಅಂಬಾನಿ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮುಖೇಶ್ ಅಂಬಾನಿ 113 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 13 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಗೌತಮ್ ಅದಾನಿ 108 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 14ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಹಿಂದೆ 12ನೇ ಸ್ಥಾನದಲ್ಲಿದ್ದ ಮುಖೇಶ್ ಅಂಬಾನಿ ಇದೀಗ 13ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಅದಾನಿ 11ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಕುಸಿದಿದ್ದಾರೆ.