'ಭವಿಷ್ಯದ ಜೀವನ' ಉತ್ತಮವಾಗಿರಲು 'ಭವಿಷ್ಯದ ನಿಧಿ' ಸಂಗ್ರಹಿಸುವುದು ಸಾಮಾನ್ಯ. ಅವರವರ ಆರ್ಥಿಕ ಸ್ಥಿತಿಗತಿ ಅನುಗುಣವಾಗಿ ಷೇರು ಮಾರುಕಟ್ಟೆ ಸೇರಿದಂತೆ ಮ್ಯೂಚುಯಲ್ ಫಂಡ್‌ಗಳಲ್ಲಿ ಹಣ ಹೂಡುವುದು, ಉಳಿತಾಯ ಖಾತೆ, ಫಿಕ್ಸೆಡ್ ಡಿಪಾಸಿಟ್, ಬಾಂಡ್ ಇತ್ಯಾದಿಗಳಲ್ಲಿ ಹಣ ಹಾಕುವುದು ಸರ್ವೇ ಸಾಮಾನ್ಯ. ಆದರೆ, ಯಾವುದು ನಮ್ಮ ಭವಿಷ್ಯಕ್ಕೆ ಹೆಚ್ಚು ಅನುಕೂಲ, ಯಾವುದು ಅಧಿಕ ರಿಟರ್ನ್ ನೀಡುತ್ತದೆ, ಯಾವುದು ಸೇಫ್, ಎಲ್ಲಿ ಹಣ ಹೂಡಿಕೆ ಮಾಡಬೇಕು ಎಂಬ ಹತ್ತು ಹಲವು ಪ್ರಶ್ನೆಗಳು ಕಾಡುವುದು ಕೂಡ ಸಾಮಾನ್ಯ. ಅದಕ್ಕೆ ಕೆಲವರು ತಮ್ಮಲ್ಲಿರುವ ಪ್ರಶ್ನೆಗಳನ್ನು ಕೇಳುತ್ತಿದ್ದು, ಸಂಬಂಧಪಟ್ಟ ಆರ್ಥಿಕ ತಜ್ಞ ತುಮ್ಮಾ ಬಾಲರಾಜ್ ಇಲ್ಲಿ ಉತ್ತರಿಸಿದ್ದಾರೆ.
ಪ್ರಶ್ನೆ 1. ರಾಜೇಂದ್ರ ಎಂಬುವುರು ಕೇಳುತ್ತಾರೆ, ನಮಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳ ಹೆಸರಿನಲ್ಲಿ ತಿಂಗಳಿಗೆ 10 ಸಾವಿರ ರೂ. ವರೆಗೆ ಹೂಡಿಕೆ ಮಾಡುವ ಆಲೋಚನೆ ಹೊಂದಿರುವೆ. ಇದಕ್ಕಾಗಿ ನಾನು ಕೆಲವು ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡಲು ಬಯಸಿರುವೆ. ಇದು ಆಯ್ಕೆ ಚೆನ್ನಾಗಿದೆಯೇ ಎಂದು ಹೇಳಿ? ಜೊತೆಗೆ ಕನಿಷ್ಠ 12 ವರ್ಷಗಳವರೆಗೆ ಹೂಡಿಕೆ ಮಾಡಲು ಯಾವುದು ಉತ್ತಮ ಯೋಜನೆಗಳಿವೆಯೇ? ತಿಳಿಸಿ.
ಉತ್ತರ: ಮೊದಲು ನಿಮ್ಮ ಪುತ್ರರ ಭವಿಷ್ಯದ ಆರ್ಥಿಕ ಅಗತ್ಯತೆಗಳ ಬಗ್ಗೆ ಅರಿತುಕೊಳ್ಳಿ. ಅದಕ್ಕೆ ಬೇಕಾದ ರೂಪುರೇಷೆ ಒದಗಿಸಿ. ಇದಕ್ಕಾಗಿ ನಿಮ್ಮ ವಾರ್ಷಿಕ ಆದಾಯದ ಶೇ. 10-12ರಷ್ಟು ನಿಮ್ಮ ಹೆಸರಿನಲ್ಲಿ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳಿ. ನೀವು ಎಲ್ಲಿ ಹೂಡಿಕೆ ಮಾಡಬೇಕು ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಎಂದರೆ ಉತ್ತಮ ಆದಾಯದ ಅವಕಾಶವಿದೆ. ಆದರೆ, ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದರಿಂದ ಸ್ವಲ್ಪ ಅಪಾಯವಿದೆ. ಹಾಗಾಗಿ ಆಯ್ಕೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಕಾಲಕಾಲಕ್ಕೆ ಅವುಗಳ ಬಗ್ಗೆ ಗಮನ ಕೊಡಬೇಕು. ಪ್ರತಿಕ್ಷಣ ಪ್ರತಿಯೊಂದು ಸ್ಟಾಕ್ ಬಗ್ಗೆ ಅರ್ಥ ಮಾಡಿಕೊಳ್ಳುವ ಕಾಲಾವಕಾಶ ಇದ್ದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಇಲ್ಲವೇ ಇದರ ಪರ್ಯಾಯವಾಗಿ ವೈವಿಧ್ಯಮಯ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿಯೂ ನೀವು ಹೂಡಿಕೆ ಮಾಡಬಹುದು. ತಿಂಗಳಿಗೆ 10,000 ರೂ.ಗಳನ್ನು 13 ಪರ್ಸೆಂಟ್ ರಿಟರ್ನ್ನಲ್ಲಿ 12 ವರ್ಷಗಳವರೆಗೆ ಹೂಡಿಕೆ ಮಾಡಿದರೆ, 30,78,000 ರೂ.ಗಳನ್ನು ಪಡೆಯಲು ಸಾಧ್ಯವಿದೆ.
ಪ್ರಶ್ನೆ 2. ಶ್ರಾವಣಿ ಎಂಬುವರು ಕೇಳುತ್ತಾರೆ, ನನ್ನ ತಂದೆಯ ವಯಸ್ಸು ಈಗ 59. ಜೀವ ವಿಮಾ ಪಾಲಿಸಿ ಅವಧಿ ಮುಗಿಯುತ್ತಿದ್ದಂತೆ 4 ಲಕ್ಷ ರೂ. ಬಂದಿದೆ. ನಾವು ಈ ಹಣವನ್ನು ಕಾರ್ಪೊರೇಟ್ ಸ್ಥಿರ ಠೇವಣಿ(ಎಫ್ಡಿ)ಯಲ್ಲಿ ಹೂಡಿಕೆ ಮಾಡಲು ಬಯಸುತ್ತೇವೆ. ಇಲ್ಲಿ ಯಾವುದಾದರೂ ಅಪಾಯಗಳಿವೆ? ಇದರ ಪರ್ಯಾಯವಾಗಿ ಏನು ಮಾಡಬಹುದು? ತಿಳಿಸಿ.
ಉತ್ತರ: ಕಾರ್ಪೊರೇಟ್ ಸ್ಥಿರ ಠೇವಣಿಗಳು (ಎಫ್ಡಿ) ಕೆಲವು ಅಪಾಯ ತಂದೊಡ್ಡಬಹುದು. ಠೇವಣಿ ಅವಧಿಯ ಕೊನೆಯಲ್ಲಿ ಕಂಪನಿಯು ನಷ್ಟದಲ್ಲಿದ್ದರೆ, ನೀವು ಹೂಡಿಕೆ ಮಾಡಿದ ಹಣ ಹಿಂತಿರುಗದೇ ಇರಬಹುದು. ಇವುಗಳಿಗೆ ಯಾವುದೇ ಠೇವಣಿ ವಿಮೆ ಅನ್ವಯಿಸುವುದಿಲ್ಲ. ಆದರೆ, ಎಲ್ಲ ಕಾರ್ಪೊರೇಟ್‌ಗಳು ಹೀಗಿರುವುದಿಲ್ಲ. ಕೆಲವು ದೊಡ್ಡ ಕಾರ್ಪೊರೇಟ್‌ಗಳು ಸಾಮಾನ್ಯ ಠೇವಣಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. ಜೊತೆಗೆ ನಷ್ಟದ ಅಪಾಯವೂ ಕಡಿಮೆ. ನೀವು ಹೂಡಿಕೆ ಮಾಡಲು ಬಯಸಿದರೆ.. ಅಂತಹ ಉತ್ತಮ ಕಂಪನಿಗಳನ್ನು ಆಯ್ಕೆ ಮಾಡಿ ಮತ್ತು ಒಂದು ವರ್ಷಕ್ಕೆ ಠೇವಣಿ ಇರಿಸಿ. ಅದರ ನಂತರ ಆ ಹಣವನ್ನು ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಠೇವಣಿ ಮಾಡಬಹುದು.
ಪ್ರಶ್ನೆ 3. ವಿನೋದ್ ಕೇಳುತ್ತಾರೆ, ನಾವು ಇತ್ತೀಚೆಗಷ್ಟೇ ಮದುವೆಯಾಗಿದ್ದೇವೆ. ನಮ್ಮಿಬ್ಬರ ಹೆಸರಿನಲ್ಲಿ ಟರ್ಮ್ ಪಾಲಿಸಿಯನ್ನು ಒಟ್ಟಿಗೆ ತೆಗೆದುಕೊಳ್ಳಲು ಸಾಧ್ಯವೇ? ತಿಳಿಸಿ.
ಉತ್ತರ: ಕೆಲವು ವಿಮಾ ಕಂಪನಿಗಳು ದಂಪತಿಗಳಿಗೆ ಜಂಟಿ ಅವಧಿಯ ವಿಮಾ ಪಾಲಿಸಿಗಳನ್ನು ನೀಡುತ್ತವೆ. ಒಂದೇ ಕಂಪನಿಯಿಂದ ನಿಮಗೆ ಅಗತ್ಯವಿರುವ ವಿಮಾ ರಕ್ಷಣೆ ಪಡೆಯುವುದು ಉತ್ತಮ. ಇಲ್ಲವೇ ಉತ್ತಮ ಕ್ಲೈಮ್ ಪಾವತಿ ಇತಿಹಾಸ ಹೊಂದಿರುವ ಎರಡು ಕಂಪನಿಗಳನ್ನು ಆಯ್ಕೆಮಾಡಿ ಮತ್ತು ಕಡಿಮೆ ಮೊತ್ತಕ್ಕೆ ಪಾಲಿಸಿಗಳನ್ನು ತೆಗೆದುಕೊಳ್ಳಿ. ಸಾಧ್ಯವಾದಷ್ಟು ಪ್ರತ್ಯೇಕ ಪಾಲಿಸಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಇದರಿಂದ ಭವಿಷ್ಯದಲ್ಲಿ ಹೆಚ್ಚು ಅನುಕೂಲ.
ಪ್ರಶ್ನೆ 4. ನನಗೀಗ 23 ವರ್ಷ. ತಿಂಗಳಿಗೆ 8 ಸಾವಿರ ರೂ.ವರೆಗೆ ಹೂಡಿಕೆ ಮಾಡಲು ಬಯಸುತ್ತೇನೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ? ನನ್ನ ಹಣಕಾಸು ಯೋಜನೆ ಹೇಗಿರಬೇಕು? ತಿಳಿಸಿ ಎನ್ನುತ್ತಾರೆ ಫಣಿ ಎಂಬ ಯುವಕ.
ಉತ್ತರ: ನೀವು ಅವಲಂಬಿತರನ್ನು ಹೊಂದಿದ್ದರೆ, ದೊಡ್ಡ ಮೊತ್ತಕ್ಕೆ ಟರ್ಮ್ ವಿಮೆ ತೆಗೆದುಕೊಳ್ಳಿ. ಆರೋಗ್ಯ ವಿಮೆ ಮತ್ತು ವೈಯಕ್ತಿಕ ಅಪಘಾತ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಲು ಮರೆಯಬೇಡಿ. ತುರ್ತು ನಿಧಿಯಾಗಿ ಮೂರರಿಂದ ಆರು ತಿಂಗಳ ವೆಚ್ಚ ತಯಾರಿಸಿ. ನೀವು ಚಿಕ್ಕ ವಯಸ್ಸಿನಿಂದಲೇ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ದೀರ್ಘಾವಧಿಯಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು 60 ವರ್ಷ ತುಂಬುವವರೆಗೆ ತಿಂಗಳಿಗೆ 8 ಸಾವಿರ ರೂ. ದರದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ, ನಿಮ್ಮ ಕೈಯಲ್ಲಿ ಸುಮಾರು 1,92,80,000 ರೂ. ಮತ್ತು ಅಂದಾಜು 13 ಪ್ರತಿಶತದಷ್ಟು ಲಾಭ ಪಡೆಯಬಹುದು. ಸಂಬಳ ಹೆಚ್ಚಾದಾಗ ಹೂಡಿಕೆಯನ್ನು ಹೆಚ್ಚಿಸಿ. ನೀವು ಗಳಿಸುವ ಹಣವು ಹೆಚ್ಚಾಗುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಕೆಲವು ನಷ್ಟದ ಅಪಾಯವಿದೆ. ಆದ್ದರಿಂದ, ಕಾಲಕಾಲಕ್ಕೆ ಯೋಜನೆಗಳ ಕಾರ್ಯಕ್ಷಮತೆ ಗಮನದಲ್ಲಿಟ್ಟುಕೊಂಡು ಹೂಡಿಕೆಗಳನ್ನು ಮುಂದುವರಿಸುವುದು ಉತ್ತಮ ಎನ್ನುತ್ತಾರೆ ಆರ್ಥಿಕ ತಜ್ಞ ತುಮ್ಮಾ ಬಾಲರಾಜ್.