ಮುಂಬೈ, ಮಹಾರಾಷ್ಟ್ರ: ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಗಳು ಮತ್ತಷ್ಟು ಇಳಿಯುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಶುಕ್ರವಾರ ಹೇಳಿದ್ದಾರೆ. ಅಲ್ಲದೇ ಚಿನ್ನವು ಮುಂದಿನ ಕನಿಷ್ಠ ಬೆಲೆಯ ಹಂತಕ್ಕೆ ತಲುಪಬಹುದು ಎಂದು ಅವರು ತಿಳಿಸಿದ್ದಾರೆ.
ಅಮೆರಿಕದಲ್ಲಿ ಹಣದುಬ್ಬರವು ಶೇಕಡಾ 2 ರ ಗುರಿಯನ್ನು ಸಮೀಪಿಸುತ್ತಿದ್ದಂತೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಗಳನ್ನು ಮುಂದುವರಿಸಿದೆ. ಹಣದುಬ್ಬರ ಸೂಚಿಸುವ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ವನ್ನು ಶೇ 2.6ಕ್ಕಿಂತ ಕಡಿಮೆ ಮಟ್ಟದಲ್ಲಿ ಇರಿಸುವುದು ಫೆಡರಲ್ ರಿಸರ್ವ್ ಗುರಿಯಾಗಿದೆ. ಆದರೆ, ಸದ್ಯ ಇದು ಶೇ 2.4 ರಲ್ಲಿರುವುದರಿಂದ ಫೇಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿಮೆ ಮಾಡುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಕಡಿತವಾಗದಿರಬಹುದು ಎನ್ನಲಾಗಿದೆ.
ಫೆಡ್ ನೀತಿಯಲ್ಲಿನ ಸಂಭಾವ್ಯ ಬದಲಾವಣೆ:"ಈ ಬೆಳವಣಿಗೆಯು ಚಿನ್ನದ ಬೆಲೆಗಳ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಬಲವಾದ ಡಾಲರ್ ಮತ್ತು ಫೆಡ್ ನೀತಿಯಲ್ಲಿನ ಸಂಭಾವ್ಯ ಬದಲಾವಣೆಗಳ ಕಾರಣದಿಂದ ಚಿನ್ನದ ಬೆಲೆಗಳು ಕಡಿಮೆಯಾಗುತ್ತಿವೆ" ಎಂದು ಎಲ್ ಕೆಪಿ ಸೆಕ್ಯುರಿಟೀಸ್ ನ ಸರಕು ಮತ್ತು ಕರೆನ್ಸಿಯ ಉಪಾಧ್ಯಕ್ಷ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದರು.
ಡೊನಾಲ್ಡ್ ಟ್ರಂಪ್ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ದಿನವಾದ ನವೆಂಬರ್ 6 ರಂದು ಭಾರತದಲ್ಲಿ 10 ಗ್ರಾಂಗೆ 78,566 ರೂ. ಇದ್ದ ಚಿನ್ನದ ಬೆಲೆಗಳು ನವೆಂಬರ್ 14 ರಂದು (ಗುರುವಾರ) 10 ಗ್ರಾಂಗೆ 73,740 ರೂ.ಗೆ ಇಳಿದಿವೆ. ಇದು ಶೇಕಡಾ 6 ಕ್ಕಿಂತ ಹೆಚ್ಚು ಬೆಲೆ ಕುಸಿತವಾಗಿದೆ ಎಂದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಂಕಿ ಅಂಶಗಳು ತಿಳಿಸಿವೆ.
ಡಾಲರ್ಗೆ ಲಾಭ, ಚಿನ್ನಕ್ಕೆ ನಷ್ಟ: ಪಿಎಲ್ ಬ್ರೋಕಿಂಗ್ ಮತ್ತು ಡಿಸ್ಟ್ರಿಬ್ಯೂಷನ್ ನ ಸಿಇಒ ಸಂದೀಪ್ ರಾಯಚೂರು ಮಾತನಾಡಿ, ಸುಂಕ ವಿಧಿಸುವ ಒಪ್ಪಂದವು ವಾಸ್ತವದಲ್ಲಿ ಅಂಗೀಕರಿಸಲ್ಪಟ್ಟಿದೆ ಮತ್ತು ಆದ್ದರಿಂದ ಅಮೆರಿಕದ ಡಾಲರ್ ಸಹ ಗಣನೀಯವಾಗಿ ಲಾಭ ಗಳಿಸಿದೆ, ಇದು ಚಿನ್ನಕ್ಕೆ ನಕಾರಾತ್ಮಕ ಅಂಶವಾಗಿದೆ ಎಂದರು.
ಇದರ ಪರಿಣಾಮವಾಗಿ, ಚಿನ್ನವು 2,602 ಯುಎಸ್ ಡಾಲರ್ ಮಟ್ಟಕ್ಕಿಂತ ಕೆಳಗಿಳಿದಿದೆ. ಇದು ಹಿಂದಿನ ಪ್ರವೃತ್ತಿಯ ಕನಿಷ್ಠ ಮಟ್ಟವಾದ 2,590 ಕ್ಕಿಂತ ಕಡಿಮೆಯಾಗಿದೆ. ಮುಂದಿನ ಬೆಂಬಲವು ಸುಮಾರು 2,534 ಮಟ್ಟಗಳಲ್ಲಿರಲಿದೆ ಮತ್ತು ನಂತರ 2,470 ಮಟ್ಟಗಳಲ್ಲಿ ಇರಲಿದೆ" ಎಂದು ಅವರು ಹೇಳಿದರು.
ಡಾಲರ್ 106.50 ಕ್ಕಿಂತ ಮೇಲಕ್ಕೆ ಏರಿ 107 ರ ಸಮೀಪಕ್ಕೆ ಬಂದಿದ್ದರಿಂದ ಎಂಸಿಎಕ್ಸ್ನಲ್ಲಿ ಚಿನ್ನದ ಬೆಲೆ 2,550 ಡಾಲರ್ ಗಿಂತ ಕಡಿಮೆಯಾಗಿದೆ ಮತ್ತು 73,500 ರೂ.ಗೆ ಇಳಿದಿದೆ. ಯುಎಸ್ ಸಿಪಿಐ ದತ್ತಾಂಶವು ಡಾಲರ್ ಬಲವನ್ನು ಹೆಚ್ಚಿಸಿದೆ.
ಇದನ್ನೂ ಓದಿ : ಕೇವಲ ₹11ಕ್ಕೆ 10 GB ಹೈಸ್ಪೀಡ್ ಡೇಟಾ! ಅತೀ ಕಡಿಮೆ ವೆಚ್ಚದ ರಿಚಾರ್ಚ್ ಪ್ಲಾನ್ ತಂದ ಜಿಯೋ