ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಬೆಳಗಾವಿ ನಗರದ ವಡ್ಡರವಾಡಿಯಲ್ಲಿ ಮಹಿಳೆಯನ್ನು ಸಾರ್ವಜನಿಕವಾಗಿ ಅರೆಬೆತ್ತಲೆಗೊಳಿಸಿ, ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಮ್ಮ ಪಕ್ಕದ ಮನೆಯ ಇಂದಿರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಠ ಅಷ್ಟೇಕರ್ ಎಂಬುವವರು ಬಂದು ನನ್ನ ತಾಯಿ ಹಾಗೂ ನನಗೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಮಹಿಳೆ ಮಾಡಿರುವ ಆರೋಪಗಳೇನು?: ಮಹಾರಾಷ್ಟ್ರದ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ನನಗೆ ಎರಡೂ ಮಕ್ಕಳಿದ್ದಾರೆ. ಗಂಡನ ಮನೆಯಲ್ಲಿ ಕಿರುಕುಳ ಇದ್ದ ಕಾರಣ ವಡ್ಡರವಾಡಿಯ ನನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದೆ, ನಮ್ಮ ಮೇಲೆ ಪದೇ ಪದೆ ಅಷ್ಟೇಕರ್ ಕುಟುಂಬ ಅವಾಚ್ಯ ಶಬ್ದದಿಂದ ನಿಂದಿಸುವುದು, ಹಲ್ಲೆ ಮಾಡುವುದು ಮಾಡುತ್ತಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಹಲ್ಲೆಗೊಳಗಾದ ಸಂತ್ರಸ್ತೆ ಮಾಧ್ಯಮದವರೊಂದಿಗೆ ಮಾತನಾಡಿ, "ನನ್ನ ತಾಯಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಿದ್ದೆ. ಆಗ ಪೊಲೀಸರು ನಿರ್ಲಕ್ಷ್ಯ ವಹಿಸಿದರು. ಈ ವಿಷಯ ತಿಳಿದು ಅಷ್ಟೇಕರ್ ಕುಟುಂಬದ ಸದಸ್ಯರು ಮತ್ತೇ ನಮ್ಮ ಮೇಲೆ ದಾಳಿ ಮಾಡಿದರು. ಎಲ್ಲರೂ ನಮ್ಮ ಕೈಯಲ್ಲಿದ್ದಾರೆ, ನೀನು ಎಲ್ಲಿ ಬೇಕಾದರೂ ದೂರು ಕೊಡು ಎಂದು ಬೆದರಿಸಿದರು. ಪೊಲೀಸ್ ಠಾಣೆಗೆ ಬಂದು ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕಿದರು. ಮನೆಯ ಜಾಗದ ಸಲುವಾಗಿ ಈ ರೀತಿ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ" ಎಂದು ಅವರು ಸಂತ್ರಸ್ತೆ ದೂರುದಾರೆ ಆರೋಪಿಸಿದ್ದಾರೆ.
"ಇನ್ನು ನಾವು ಮನೆ ಖಾಲಿ ಮಾಡಬೇಕು ಎಂಬ ಉದ್ದೇಶಕ್ಕೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಮನೆಗೆ ಯಾರೇ ಬಂದರೂ ಬೇರೆಯವರೊಂದಿಗೆ ನೀನು ಸಂಬಂಧ ಹೊಂದಿದ್ದೀಯಾ ಎಂದು ಅವಮಾನಿಸುತ್ತಾರೆ. ನಾನು ವೇಶ್ಯಾವಾಟಿಕೆ ನಡೆಸಿಲ್ಲ, ಬೇಕಾದರೆ ನೀವು ನನ್ನ ವಿರುದ್ಧ ದೂರು ಕೊಡಿ ಎಂದಿದ್ದೆ. ಹೂವಪ್ಪ ಅಷ್ಟೇಕರ್ ನಮ್ಮ ತಾಯಿ ಸೀರೆ ಎಳೆದಾಡಿದ್ದಾನೆ, ಪೂಜಾ ಅಷ್ಟೇಕರ್ ನಮಗೆ ಧಮ್ಕಿ ಹಾಕಿದ್ದಾಳೆ" ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆ ಮನೆಗೆ ಶಾಸಕರ ಭೇಟಿ: ಸ್ಥಳಕ್ಕೆ ಶಾಸಕ ಆಸೀಫ್ ಸೇಠ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಂತ್ರಸ್ತ ಕುಟುಂಬ ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡಿದೆ.
ಘಟನೆ ಬಗ್ಗೆ ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು: ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರತಿಕ್ರಿಯಿಸಿ, "ಘಟನೆ ಸಂಬಂಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬೇರೆ ವಿಷಯಕ್ಕೆ ದೂರುದಾರರು ಮತ್ತು ನೆರೆ ಮನೆಯವರ ಮಧ್ಯ ಜಗಳವಾಗಿದೆ. ಪ್ರಕರಣದ ಸಂಬಂಧ ವರದಿ ನೀಡುವಂತೆ ಡಿಸಿಪಿ ಅವರಿಗೆ ಸೂಚಿಸಿದ್ದೇನೆ. ಇನ್ನು ದೂರು ತೆಗೆದುಕೊಳ್ಳಲು ವಿಳಂಬ ಆಗಿರುವುದಕ್ಕೆ ಮತ್ತು ದೂರು ವಾಪಸ್ ಪಡೆಯಲು ಒತ್ತಡ ಹಾಕಿರುವ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ" ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಾಲಕಿಗೆ ಚುಡಾಯಿಸಿದ ಐವರು ಪುಂಡರ ಬಂಧನ: ಕಿಡಿಗೇಡಿಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ