ಬ್ಯಾಂಕಾಕ್:ನಿಧಾನಗತಿಯ ಆರ್ಥಿಕತೆಯಿಂದ ಚೀನಾದ ಮಾರುಕಟ್ಟೆಗಳು ಭಾರಿ ಕುಸಿತ ಕಂಡಿವೆ. ಈ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಷೇರು ಸೂಚ್ಯಂಕ ನಿಧಿಗಳ ಮೂಲಕ ಷೇರುಗಳನ್ನು ಖರೀದಿ ಮಾಡಲು ನಿರ್ಧರಿಸಿದೆ. ಅಷ್ಟೇ ಅಲ್ಲ ಇದನ್ನು ಮತ್ತಷ್ಟು ವಿಸ್ತರಿಸುವುದಾಗಿಯೂ ಹೇಳಿದೆ.
ಚೀನಾದ ಸರ್ಕಾರಿ ಬ್ಯಾಂಕುಗಳು ಮತ್ತು ಇತರ ದೊಡ್ಡ ಸರ್ಕಾರಿ ನಿಯಂತ್ರಿತ ಉದ್ಯಮಗಳನ್ನು ಹೊಂದಿರುವ ಚೀನಾದ ಸಾರ್ವಭೌಮ ನಿಧಿಯಾಗಿರುವ ಸೆಂಟ್ರಲ್ ಹುಯಿಜಿನ್ ಇನ್ವೆಸ್ಟ್ಮೆಂಟ್ನ ಈ ಪ್ರಕಟಣೆ ಹೊರಡಿಸಿದೆ. ಈ ಘೋಷಣೆ ಅಲ್ಲಿನ ಷೇರು ಮಾರುಕಟ್ಟೆಗಳಿಗೆ ದೊಡ್ಡ ಚೇತರಿಕೆ ತಂದು ಕೊಟ್ಟಿದೆ. ಈ ಪ್ರಕಟಣೆ ಹೊರ ಬಿದ್ದ ಬಳಿಕ, ಮಂಗಳವಾರದ ಚೀನಾ ಷೇರು ಪೇಟೆ ವ್ಯವಹಾರಗಳು ಲಾಭದತ್ತ ಮುಖ ಮಾಡಿವೆ. ಹಲವು ಷೇರುಗಳು ಏರಿಕೆ ದಾಖಲಿಸಿ ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿವೆ.
ಚೀನಾದ ಮಾರುಕಟ್ಟೆಗಳಲ್ಲಿ ಭಾರೀ ಮಾರಾಟದ ಒತ್ತಡ ಕಂಡು ಬಂದಿತ್ತು. ಈ ಒತ್ತಡದಿಂದ ಮಾರುಕಟ್ಟೆಗಳನ್ನು ಹೊರಗೆ ತರಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಇತರ ಕಂಪನಿಗಳಲ್ಲಿನ ಷೇರುಗಳ ಖರೀದಿಯನ್ನು ಸೆಂಟ್ರಲ್ ಹುಯಿಜಿನ್ ಇನ್ವೆಸ್ಟ್‌ಮೆಂಟ್ ಹೆಚ್ಚಿಸಿದೆ. ಸೆಂಟ್ರಲ್ ಹುಯಿಜಿನ್ನ ಈ ನಿರ್ಧಾರದಿಂದಾಗಿ ಸೋಮವಾರ ಶಾಂಘೈ ಮತ್ತು ಶೆನ್ಜೆನ್‌ನಲ್ಲಿ ಸಣ್ಣ ಹಾಗೂ ಮಧ್ಯಮ ಬಂಡವಾಳ ಷೇರುಗಳು ನಷ್ಟದ ನಡುವೆ ಲಾಭದತ್ತ ಮುಖ ಮಾಡಿದವು.
ಮತ್ತೊಂದು ಕಡೆ ಸರ್ಕಾರಿ ಬ್ಯಾಂಕ್‌ಗಳು ಮತ್ತು ಇತರ ದೊಡ್ಡ ಕಂಪನಿಗಳ ಷೇರು ಬೆಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂತು. ಮಾರುಕಟ್ಟೆಯ ವಾಚ್‌ಡಾಗ್, ಚೀನಾ ಸೆಕ್ಯುರಿಟೀಸ್ ರೆಗ್ಯುಲೇಟರಿ ಕಮಿಷನ್ ಸೆಂಟ್ರಲ್ ಹುಯಿಜಿನ್ ಇನ್ವೆಸ್ಟ್ಮೆಂಟ್ನ ಈ ಪ್ರಕಟಣೆಯನ್ನು ಸ್ವಾಗತಿಸಿದೆ. "ಐತಿಹಾಸಿಕವಾಗಿ ಕಡಿಮೆ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿದ್ದ ಸಣ್ಣ, ಮಧ್ಯಮ ಹಾಗೂ ದೊಡ್ಡ ಬಂಡವಾಳದ ಕಂಪನಿಗಳ ಷೇರುಗಳಲ್ಲಿ ಚೇತರಿಕೆ ಕಂಡು ಬರಲು ಕಾರಣವಾಗಿದೆ ಎಂದು ಚೀನಾ ಸೆಕ್ಯುರಿಟೀಸ್ ರೆಗ್ಯುಲೇಟರಿ ಕಮಿಷನ್ ಹೇಳಿದೆ. ಸೆಂಟ್ರಲ್ ಹುಯಿಜಿನ್ ನಿಧಿ ಷೇರುಗಳ ಖರೀದಿಯಲ್ಲಿ ತೊಡಗಿರುವುದನ್ನು ನಾವು ಬೆಂಬಲಿಸುತ್ತೇವೆ ಎಂದೂ ಚೀನಾ ಸೆಕ್ಯುರಿಟೀಸ್ ಹೇಳಿದೆ. ಇದು ಮಾರುಕಟ್ಟೆಯ ಸ್ಥಿರತೆ ತರಲು ನೆರವಾಗಿದೆ ಎಂದೂ ಅದು ಸಂತಸ ವ್ಯಕ್ತಪಡಿಸಿದೆ.
ಸಾರ್ವಜನಿಕ ನಿಧಿಗಳು, ಖಾಸಗಿ ಈಕ್ವಿಟಿ ಫಂಡ್‌ಗಳು, ಸೆಕ್ಯುರಿಟೀಸ್ ಕಂಪನಿಗಳು, ಸಾಮಾಜಿಕ ಭದ್ರತಾ ನಿಧಿಗಳು, ವಿಮಾ ಸಂಸ್ಥೆಗಳು ಮತ್ತು ವರ್ಷಾಶನ ನಿಧಿಗಳಂತಹ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಖರೀದಿಯನ್ನು ಸುಗಮಗೊಳಿಸುತ್ತದೆ ಎಂದು ಚೀನಾ ಸೆಕ್ಯುರಿಟೀಸ್ ಹೇಳಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಶೇ 0.8ರಷ್ಟು ಮತ್ತು ಹಾಂಕಾಂಗ್ನ ಹ್ಯಾಂಗ್ ಸೆಂಗ್ ಶೇ 2.5 ರಷ್ಟು ಏರಿಕೆ ದಾಖಲಿಸಿದವು.
ಇದನ್ನು ಓದಿ:ಲಕ್ಕಿ ಡ್ರಾ ಹೆಸರಿನಲ್ಲಿ ವಂಚನೆ: ಆನ್ಲೈನ್ ಖರೀದಿಯಲ್ಲಿ ಹೆಚ್ಚಿನ ಕಾಳಜಿ ಅಗತ್ಯ