ನವದೆಹಲಿ:ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ನಲ್ಲಿ ಷೇರುಪೇಟೆ ಹೂಡಿಕೆದಾರರಿಗೆ ತೆರಿಗೆ ಬಿಸಿ ಜೋರಾಗಿಯೇ ತಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಮ್ಮ ಬಜೆಟ್ ಭಾಷಣದಲ್ಲಿ, ಷೇರುಪೇಟೆ ಹೂಡಿಕೆದಾರರಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿಯ ಬಂಡವಾಳ ಗಳಿಕೆಯ ಮೇಲೆ ತೆರಿಗೆ ಹೆಚ್ಚಿಸಿದ್ದಾರೆ.
ಷೇರುಗಳ ಮಾರಾಟದಿಂದ ಅಲ್ಪಾವಧಿಯ ಯಾವುದೇ ಲಾಭದ ಮೇಲೆ ಇನ್ನು ಮುಂದೆ ಶೇಕಡಾ 20ರಷ್ಟು ತೆರಿಗೆ ದರ ಪಾವತಿಸಬೇಕಾಗುತ್ತದೆ. ಈ ಹಿಂದೆ ಷೇರುಪೇಟೆ ಹೂಡಿಕೆಯಿಂದ ಬಂದಿರುವ ಲಾಭದಲ್ಲಿ ಶೇ 15ರಷ್ಟು ತೆರಿಗೆ ಪಾವತಿಸಬೇಕಿತ್ತು. ಹೂಡಿಕೆದಾರರ ಬಂಡವಾಳದ ಮೇಲೆ ಬಂದಿರುವ (ಎಲ್ಲಾ ಹಣಕಾಸು ಮತ್ತು ಹಣಕಾಸೇತರ ಆಸ್ತಿಗಳ) ಲಾಭದಲ್ಲಿ ಇದೀಗ ಶೇ 5ರಷ್ಟು ತೆರಿಗೆ ಹೆಚ್ಚಿಸಲಾಗಿದೆ ಎಂದು ಸಚಿವೆ ತಿಳಿಸಿದರು.
ದೀರ್ಘಾವಧಿಯ ಹೂಡಿಕೆಗೆ ಪ್ರೋತ್ಸಾಹ: ಎಲ್ಲಾ ಹಣಕಾಸು ಮತ್ತು ಹಣಕಾಸೇತರ ಆಸ್ತಿಗಳ ಮೇಲಿನ ದೀರ್ಘಾವಧಿಯ ಲಾಭಗಳ ಮೇಲೆ ಈ ಹಿಂದೆ ಶೇ 10 ತೆರಿಗೆ ಪಾವತಿಸಬೇಕಾಗಿತ್ತು. ಇದೀಗ ಈ ದರವನ್ನು ಶೇಕಡಾ 12.5ಕ್ಕೆ ಏರಿಸಲಾಗಿದೆ. ಇದರೊಂದಿಗೆ ದೀರ್ಘಾವಧಿಯ ಹೂಡಿಕೆಯನ್ನು ಪ್ರೋತ್ಸಾಹಿಸಲಾಗಿದೆ. ಪ್ರತಿ ವರ್ಷಕ್ಕೆ 1 ಲಕ್ಷದಿಂದ 1.25 ಲಕ್ಷದ ಲಾಭದವರೆಗೆ ವಿನಾಯಿತಿ ನೀಡಲಾಗಿದೆ. ಇದು ಕೆಳ ಮತ್ತು ಮಧ್ಯಮ ವರ್ಗದವರಿಗೆ ಪ್ರಯೋಜನವಾಗಲಿದೆ.
ಒಂದು ವರ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಿರುವುದನ್ನು (ಪಟ್ಟಿ ಮಾಡಲಾದ ಹಣಕಾಸು ಆಸ್ತಿಗಳು) ದೀರ್ಘಾವಧಿ ಎಂದು ವರ್ಗೀಕರಿಸಲಾಗಿದೆ. ಆದರೆ, ಪಟ್ಟಿ ಮಾಡದ ಹಣಕಾಸು ಸ್ವತ್ತುಗಳು ಮತ್ತು ಎಲ್ಲಾ ಹಣಕಾಸೇತರ ಆಸ್ತಿಗಳನ್ನು ದೀರ್ಘಾವಧಿಯೆಂದು ವರ್ಗೀಕರಿಸಲು ಕನಿಷ್ಠ ಎರಡು ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಪಟ್ಟಿ ಮಾಡಿದ ಹಣಕಾಸು ಆಸ್ತಿಗಳಲ್ಲಿ ಬಾಂಡ್‌ಗಳು ಮತ್ತು ಡಿಬೆಂಚರ್‌ಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ಮಾರುಕಟ್ಟೆ- ಸಂಯೋಜಿತ ಡಿಬೆಂಚರ್‌ಗಳು ಬರುತ್ತವೆ'' ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
ಇದನ್ನೂ ಓದಿ:1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್: 2ಕೋಟಿ ಉದ್ಯೋಗ ಸೃಷ್ಟಿ ಭರವಸೆ, ನಿರುದ್ಯೋಗ ನಿವಾರಣೆಗೆ ದಿಟ್ಟ ಹೆಜ್ಜೆ - 1 CRORE INTERNSHIP 2 CRORE JOB