ಹೈದರಾಬಾದ್: ಹೈದರಾಬಾದ್‌ನಲ್ಲಿ ಮೊದಲು ಮನಸ್ಸಿಗೆ ಹೊಳೆಯುವ ಖಾದ್ಯ ಎಂದರೆ ಅದು ಬಿರಿಯಾನಿ. ಯಾವುದೇ ಪಾರ್ಟಿ ಇರಲಿ, ಅತಿಥಿಗಳು ಮನೆಗೆ ಬರ್ತಾರೆ ಎಂದರೆ ಅಲ್ಲಿ ಬಿರಿಯಾನಿ ಇರಲೇಬೇಕು. ಅಡುಗೆ ಮಾಡಲು ಬೇಜಾರು ಅಂತಾ ಅನಿಸಿದರೆ ಮನಸ್ಸಿಗೆ ಬರುವ ಮೊದಲ ಆಹಾರವೇ ಈ ಬಿರಿಯಾನಿ. ಅಂದ ಹಾಗೆ ಇದು ನಗರದ ಜೀವನಶೈಲಿಯ ಭಾಗವಾಗಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಆಚರಣೆಗಳಲ್ಲಿ ಬಂಧು ಮಿತ್ರರು ಒಟ್ಟಾಗಿ ಬಿರಿಯಾನಿ ಸೇವಿಸುವುದು ಒಂದು ಕ್ರೇಜ್.
ಹೌದು ಇದೇ ವಿಷಯವಾಗಿ ಒಂದು ಇಂಟ್ರೆಸ್ಟಿಂಗ್ ವಿಚಾರ ಹೊರ ಬಿದ್ದಿದೆ. ಪ್ರತಿ ನಿಮಿಷಕ್ಕೆ 34 ಪ್ಲೇಟ್‌ಗಳ ಬಿರಿಯಾನಿ ಆರ್ಡರ್ ಮಾಡುವ ಮೂಲಕ ದೇಶದಲ್ಲೇ ಅತ್ಯಧಿಕ ಆರ್ಡರ್ ಮಾಡಿದ ಖ್ಯಾತಿಯನ್ನು ಹೈದರಾಬಾದ್ ಜನ ಪಡೆದುಕೊಂಡಿದ್ದಾರೆ. 2024ರಲ್ಲಿ ನಗರವು ಬಿರಿಯಾನಿಗಾಗಿ 1.57 ಕೋಟಿ ಆರ್ಡರ್ ಮಾಡಿದೆ. ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಬಿರಿಯಾನಿ ಜನಪ್ರಿಯ ಖಾದ್ಯವಾಗಿದ್ದರೂ, ಮುಂಜಾನೆ 4 ಗಂಟೆಯಿಂದಲೇ ಆರ್ಡರ್ ಮಾಡುವವರೂ ಇದ್ದಾರೆ ಎಂಬುದು ಗಮನಾರ್ಹ.
ಈ ಆರ್ಡರ್‌ಗಳಲ್ಲಿ ಹೆಚ್ಚಿನವು ಚಿಕನ್ ಬಿರಿಯಾನಿಗಾಗಿ ಎಂದು Swiggy ಯ ಡೇಟಾ ಬಹಿರಂಗಪಡಿಸಿದೆ. ಒಬ್ಬ ಗ್ರಾಹಕರು ಕಳೆದ ವರ್ಷ 60 ಪ್ಲೇಟ್‌ಗಳ ಬಿರಿಯಾನಿ ಮೇಲೆ 18,840 ರೂ. ವೆಚ್ಚ ಮಾಡಿದ್ದಾರೆ. ಆಚರಣೆಗಳ ಸಂದರ್ಭದಲ್ಲಿ ಇತರ ಪ್ಲಾಟ್‌ಫಾರ್ಮ್‌ಗಳು, ರೆಸ್ಟೋರೆಂಟ್‌ಗಳಿಂದ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿ ಒಟ್ಟು ಬಳಕೆ ದ್ವಿಗುಣಗೊಳ್ಳುತ್ತದೆ.
ಟಿ20 ವಿಶ್ವಕಪ್ ಸಂದರ್ಭದಲ್ಲಿ ಬಿರಿಯಾನಿ ಆರ್ಡರ್‌ಗಳಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಈ ಈವೆಂಟ್ ಸಂದರ್ಭದಲ್ಲಿ 8.69 ಲಕ್ಷ ಪ್ಲೇಟ್‌ಗಳನ್ನು ಆರ್ಡರ್ ಮಾಡಲಾಗಿದೆ.
ಮುಂಜಾನೆ ದೋಸೆ ಗೆ ಇನ್ನಿಲ್ಲದ ಬೇಡಿಕೆ: ಹೈದರಾಬಾದ್ ನಗರದ ಜನರು ಕೂಡಾ ದೋಸೆ ಎಂದರೆ ಮುಗಿ ಬೀಳುತ್ತಾರೆ. ಬೆಳಗ್ಗೆ ದೋಸೆ ಆರ್ಡರ್‌ಗಳಲ್ಲಿ ರಾಷ್ಟ್ರದಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದೆ, ವರ್ಷವಿಡೀ 17.54 ಲಕ್ಷ ದೋಸೆ ಆರ್ಡರ್‌ಗಳನ್ನು ಮಾಡಲಾಗಿದೆ. ಹೈದರಾಬಾದಿಗಳು ದೋಸೆ ರುಚಿ ಸವಿಯುವ ಮೂಲಕ ತಮ್ಮ ದಿನಚರಿ ಶುರು ಮಾಡಲು ಇಷ್ಟ ಪಡುತ್ತಾರೆ. ಹಾಗಾಗಿ ದೋಸೆ ಹೈದರಾಬಾದಿಗಳ ನೆಚ್ಚಿನ ತಿಂಡಿ ಕೂಡಾ ಆಗಿದೆ.
ಇದನ್ನು ಓದಿ: ಕ್ರಿಸ್ಮಸ್ ವಿಶೇಷ 'ಎಗ್‌ಲೆಸ್ ಪ್ಲಮ್ ಕೇಕ್': ಹೀಗೆ ಮಾಡಿ ನೋಡಿ ವಾವ್ ಎನ್ನುತ್ತಾರೆ ಅತಿಥಿಗಳು..