ಮುಂಬೈ:ಲೋಕಸಭಾ ಚುನಾವಣಾ ಫಲಿತಾಂಶದ ದಿನ ಅಂದ್ರೆ, ನಿನ್ನೆ (ಮಂಗಳವಾರ) ಭಾರತೀಯ ಹೂಡಿಕೆದಾರರಿಗೆ ತೀವ್ರ ಚಿಂತೆಗೆ ಒಳಗಾಗಿದ್ದರು. ಚುನಾವಣಾ ಫಲಿತಾಂಶದ ಪರಿಣಾಮ ಛಾಯೆ ಷೇರು ಮಾರುಕಟ್ಟೆ ಮೇಲೆ ಬಿದ್ದಿದೆ. ಇಂಡಿಯಾ ಮೈತ್ರಿಕೂಟಕ್ಕೆ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳು ಬಂದಿವೆ. ಎನ್ಡಿಎಗೆ ಲಭಿಸಬೇಕಿದ್ದ ಸ್ಥಾನಗಳು ದೊರೆಯದ ಹಿನ್ನೆಲೆ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಎಕ್ಸಿಟ್ ಪೋಲ್ನ ಅಂಕಿ ಸಂಖ್ಯೆ ಬಂದ ಬಳಿಕ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. ಆದರೆ, ಫಲಿತಾಂಶದ ದಿನ ಎನ್ಡಿಎಗೆ ಸ್ಥಾನಗಳು ಕುಸಿಯುತ್ತಿದ್ದಂತೆಯೇ, ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುವುದರಲ್ಲಿ ತೊಡಗಿದರು. ಪರಿಣಾಮ ಸೆನ್ಸೆಕ್ಸ್ 6,100 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿತ ಕಂಡಿದೆ.
ಮಂಗಳವಾರ, ಸೆನ್ಸೆಕ್ಸ್- 4,390 ಪಾಯಿಂಟ್ ಅಥವಾ ಶೇ. 5.74 ರಷ್ಟು ಭಾರಿ ನಷ್ಟದೊಂದಿಗೆ 72,079.05 ಕ್ಕೆ ಕೊನೆಗೊಂಡಿತು. ನಿಫ್ಟಿ 50- 1,379 ಪಾಯಿಂಟ್ ಅಥವಾ 5.93 ರಷ್ಟು ಕಡಿತದೊಂದಿಗೆ 21,884.50ಕ್ಕೆ ಕೊನೆಗೊಂಡಿತು. ಮಾರ್ಚ್ 2020 ರಿಂದ ನಾಲ್ಕು ವರ್ಷಗಳಲ್ಲಿ ನಿಫ್ಟಿ 50ಯು ಅತಿದೊಡ್ಡ ಪ್ರಮಾಣದಲ್ಲಿ ಒಂದೇ ದಿನದಲ್ಲಿ ಭಾರಿ ಕುಸಿತ ಕಾಣುವಂತಾಯಿತು. ಈ ಹಿಂದೆ, COVID-19 ಸಮಯದಲ್ಲಿ ಅಂದ್ರೆ, 2020ರ ಆರಂಭದಲ್ಲಿ ಇದೇ ರೀತಿ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಉಂಟಾಗಿತ್ತು.
ಮಂಗಳವಾರದ ಬೆಳಗಿನ ಮಾರುಕಟ್ಟೆಯಲ್ಲಿ ಹೊಡಿಕೆದಾರರು ಭಯದಿಂದಲೇ ಸ್ಟಾಕ್ಗಳನ್ನು ಮಾರಾಟ ಮಾಡುವುದು ಕಂಡುಬಂತು. ಮಧ್ಯಾಹ್ನದ ವೇಳೆ ಸ್ವಲ್ಪ ಚೇತರಿಕೆಯಾಯಿತು. ಆದರೆ, ಕೊನೆಯ ಸೆಷನ್‌ನಲ್ಲಿ ಮತ್ತೊಂದು ಸುತ್ತಿನ ಮಾರಾಟವು ಸೂಚ್ಯಂಕವನ್ನು ಕುಸಿತದಿಂದ 1,379.40 ಪಾಯಿಂಟ್‌ಗಳ ಬೃಹತ್ ಇಳಿಕೆಯೊಂದಿಗೆ 21,884.50ಕ್ಕೆ ಕೊನೆಗೊಂಡಿತು. ಎಫ್‌ಎಂಸಿಜಿಯನ್ನು ಹೊರತುಪಡಿಸಿ, ಎಲ್ಲಾ ವಲಯಗಳು ಕುಸಿತ ಕಂಡವು. ಪಿಎಸ್‌ಯು ಬ್ಯಾಂಕ್‌ಗಳು ಮತ್ತು ಎನರ್ಜಿ ಕ್ಷೇತ್ರಗಳಲ್ಲಂತೂ ತೀರಾ ಕಳಪೆ ಪ್ರದರ್ಶನ ಬಂದಿದ್ದರಿಂದ ತೀವ್ರ ಕುಸಿತದೊಂದಿಗೆ ಮಾರುಕಟ್ಟೆ ಕ್ಲೋಸಿಂಗ್ ಆಗಿರುವುದು ಕಂಡು ಬಂದಿದೆ.
ದಲಾಲ್ ಸ್ಟ್ರೀಟ್‌ನ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಚುನಾವಣೆಯಲ್ಲಿ ಗೆಲ್ಲಬಹುದು ಎಂದು ತೋರಿಸಿದ ಆರಂಭಿಕ ಕೌಂಟಿಂಗ್ ಬಳಿಕ ನಿರಾಶೆಯಾಯಿತು. ಇದರಿಂದ ಷೇರು ಮಾರುಕಟ್ಟೆ ಆರಂಭದ ಎರಡು ಗಂಟೆಯೊಳಗೆ ಸೆನ್ಸೆಕ್ಸ್ 6,100 ಅಂಕಗಳನ್ನು ಕಳೆದುಕೊಂಡು ಅತಿದೊಡ್ಡ ಇಂಟ್ರಾಡೇ ಕುಸಿತವನ್ನು ದಾಖಲಿಸಿದೆ. ಕಳೆದ ನಾಲ್ಕು ವರ್ಷಗಳಲ್ಲೇ ಅತಿ ದೊಡ್ಡ ಇಳಿಕೆ ಇದಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರದ ಸೇಷನ್ನಲ್ಲಿ ದಾಖಲಾದ ಎಲ್ಲಾ ಲಾಭಗಳನ್ನು ಅಳಿಸಿಹಾಕಿದೆ.
ಎಕ್ಸಿಟ್ ಪೋಲ್ ಭವಿಷ್ಯ, ಮಾರುಕಟ್ಟೆ ಬೂಮ್:ಸೋಮವಾರ ಎಕ್ಸಿಟ್ ಪೋಲ್, ಲೋಕಸಭೆ ಫಲಿತಾಂಶ ನುಡಿದ ಹಿನ್ನೆಲೆಯಲ್ಲಿ ಎನ್‌ಎಸ್‌ಇ ನಿಫ್ಟಿ 50- 733.20 ಪಾಯಿಂಟ್‌ಗಳು ಅಥವಾ ಶೇ 3.25ರಷ್ಟು ಗಳಿಸಿ 23,263.90ಕ್ಕೆ ಏರಿಕೆ ಕಂಡಿತ್ತು. ಆದರೆ, ಬಿಎಸ್‌ಇ ಸೆನ್ಸೆಕ್ಸ್ 2507.47 ಪಾಯಿಂಟ್ ಅಥವಾ 3.39ರಷ್ಟು ಜಿಗಿದು 76,468.78ಕ್ಕೆ ತಲುಪಿತ್ತು.
ಮಾರುಕಟ್ಟೆ ಹೇಗೆಲ್ಲ ವರ್ತಿಸುತ್ತೆ: ತಜ್ಞರು ಹೇಳುವುದೇನು?: ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಮಾರುಕಟ್ಟೆಯ ಕಾರ್ಯಕ್ಷಮತೆ ಕುರಿತು ಪ್ರತಿಕ್ರಿಯಿಸಿ, "ಸಾರ್ವತ್ರಿಕ ಚುನಾವಣೆಯ ಅನಿರೀಕ್ಷಿತ ಫಲಿತಾಂಶವು ದೇಶದ ಷೇರು ಮಾರುಕಟ್ಟೆಯಲ್ಲಿ ಮಾರಾಟದ ಭಯದ ಅಲೆ ಹುಟ್ಟುಹಾಕಿತು. ಜೊತೆಗೆ ಇತ್ತೀಚಿನ ಗಣನೀಯ ರ್‍ಯಾಲಿ ಹಿಮ್ಮೆಟ್ಟಿಸಿದೆ. ಇದರ ಹೊರತಾಗಿಯೂ, ಮಾರುಕಟ್ಟೆಯು ತನ್ನನ್ನು ಉಳಿಸಿಕೊಂಡಿದೆ. ಪ್ರಮುಖ ಚುನಾವಣಾ ವಿಜೇತರಾಗಿ ಬಿಜೆಪಿ ನೇತೃತ್ವದ ಸಮ್ಮಿಶ್ರದಲ್ಲಿ ಸ್ಥಿರತೆಯ ನಿರೀಕ್ಷೆ, ಆ ಮೂಲಕ ಮಧ್ಯಮಾವಧಿಯಲ್ಲಿ ಗಣನೀಯ ಕುಸಿತವನ್ನು ತಗ್ಗಿಸುತ್ತದೆ. ಚುನಾವಣಾ ಫಲಿತಾಂಶಗಳ ಎಫೆಕ್ಟ್ ಸಾಮಾಜಿಕ ಅರ್ಥಶಾಸ್ತ್ರದ ಮೇಲೆ ಕೇಂದ್ರೀಕರಿಸುವ ರಾಜಕೀಯ ನೀತಿಯಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗಬಹುದು. ಇದು ಗ್ರಾಮೀಣ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ'' ಎಂದು ತಿಳಿಸಿದರು.
''ವಿದ್ಯುತ್, ಬಂಡವಾಳ ಸರಕುಗಳು, ರಿಯಲ್ ಎಸ್ಟೇಟ್ ಮತ್ತು ಕೈಗಾರಿಕೆಗಳು ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ಅಗ್ರಸ್ಥಾನದಲ್ಲಿರುವ ವಲಯಗಳು ಮುಂದಿನ ಅವಧಿಯಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅದೇನೇ ಇದ್ದರೂ, ಈ ವಲಯಗಳಿಗೆ ದೀರ್ಘಾವಧಿಯ ಬೆಳವಣಿಗೆಯ ನಿರೀಕ್ಷೆಗಳು ದೃಢವಾಗಿ ಉಳಿದಿವೆ'' ಎಂದು ನಾಯರ್ ಹೇಳಿದರು.
ಫ್ರಂಟ್‌ಲೈನ್ ಸೂಚ್ಯಂಕವನ್ನು ಕಡಿಮೆ ಮಾಡಲು ಮಧ್ಯಮ ಮತ್ತು ಸಣ್ಣ - ಕ್ಯಾಪ್‌ಗಳು ಶೇ 7.8 ಕ್ಕಿಂತ ಹೆಚ್ಚು ಸರಿಪಡಿಸಲ್ಪಟ್ಟಿದ್ದರಿಂದ ನಿಜವಾದ ಪರಿಣಾಮ ಮಾರುಕಟ್ಟೆಯಲ್ಲಿ ಕಂಡು ಬಂದಿದೆ. ದೈನಂದಿನ ಚಾರ್ಟ್‌ನಲ್ಲಿ, ಸೂಚ್ಯಂಕವು ಬೃಹತ್ ಕೆಂಪು ಕ್ಯಾಂಡಲ್ಸ್ಟಿಕ್ ರೂಪು ಗೊಂಡಿತ್ತು. ಇದು ಮಾರುಕಟ್ಟೆಗಳಲ್ಲಿ ತೀವ್ರ ನಿರಾಶಾವಾದಕ್ಕೆ ಕಾರಣವಾಗಿದೆ.
BHEL, ಹಿಂದ್ ಕಾಪರ್, BEL, Nalco, CONCOR ಅತಿ ಹೆಚ್ಚು PSU ನಷ್ಟವನ್ನು ಅನುಭವಿಸಿವೆ. ಪಿಎಸ್‌ಯು ಷೇರುಗಳು ಶೇಕಡಾ 25 ರಷ್ಟು ಕುಸಿದಿವೆ. ಪವರ್ ಫೈನಾನ್ಷಿಯರ್ ಕಂಪನಿಗಳು ಅತಿದೊಡ್ಡ ನಷ್ಟವನ್ನು ಅನುಭವಿಸಿವೆ. ಡಾಬರ್, ಕೋಲ್ಗೇಟ್ ಟಾಪ್ ಗೇನರ್ ಆಗುವುದರೊಂದಿಗೆ ಬಳಕೆಗೆ ಸಂಬಂಧಿಸಿದ ಷೇರುಗಳು ಆರೋಗ್ಯಕರ ಲಾಭವನ್ನು ಕಂಡಿವೆ. ಬ್ಯಾಂಕ್ ನಿಫ್ಟಿ ಸೂಚ್ಯಂಕವು ಋಣಾತ್ಮಕವಾಗಿದೆ. ಅಂತಿಮವಾಗಿ 46,928.60 ಅಂಕಗಳಲ್ಲಿ ಸ್ಥಿರಗೊಂಡಿದೆ. ತಾಂತ್ರಿಕವಾಗಿ, ಬ್ಯಾಂಕ್ ನಿಫ್ಟಿಯು ಹ್ಯಾಂಗಿಂಗ್ ಮ್ಯಾನ್ ಕ್ಯಾಂಡಲ್ ಸ್ಟಿಕ್ ಮಾದರಿಯ ಕೆಳಮಟ್ಟವನ್ನು ಉಳಿಸಿಕೊಂಡಿದ್ದು, ಇದು ದೌರ್ಬಲ್ಯಕ್ಕೆ ಕಾರಣವಾಗಿದೆ'' ಎಂದು ತಿಳಿಸಿದರು.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ತಾಂತ್ರಿಕ ಸಂಶೋಧನಾ ವಿಶ್ಲೇಷಕ ನಾಗರಾಜ್ ಶೆಟ್ಟಿ ಮಾತನಾಡಿ, ''2024ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯ ಹಿನ್ನೆಲೆಯಲ್ಲಿ ನಿಫ್ಟಿ ಮಂಗಳವಾರ ಭಾರಿ ಇಳಿಕೆ ಕಂಡಿತು. ದಿನದ ವಹಿವಾಟಿನ ವೇಳೆ, 1,379 ಅಂಕಗಳು ತೀವ್ರವಾಗಿ ಕುಸಿತ ಕಂಡಿದೆ. ಮತಗಳ ಎಣಿಕೆ ಪ್ರಗತಿಯಲ್ಲಿರುವಾಗಲೇ ಮಾರುಕಟ್ಟೆಯು ಪಾತಾಳಕ್ಕೆ ಕುಸಿಯಿತು. ಬಳಿಕ ಒಂದು ಸಣ್ಣ ಚೇತರಿಕೆಯ ಪ್ರಯತ್ನವೂ ಕಂಡು ಬಂದಿತ್ತು. ಆದರೆ, ಮಾರುಕಟ್ಟೆಯು ಇಂಟ್ರಾಡೇ ಸ್ಥಿರತೆಯನ್ನು ಉಳಿಸಿಕೊಳ್ಳಲು ವಿಫಲವಾಯಿತು'' ಎಂದರು.
ಇದನ್ನೂ ಓದಿ:ಪಾತಾಳಕ್ಕೆ ಕುಸಿದ ಷೇರು ಮಾರುಕಟ್ಟೆ; ಎಚ್ಚರಿಕೆಯಿಂದ ಹೆಜ್ಜೆ ಇಡಲು ತಜ್ಞರ ಸಲಹೆ, ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು ಗೊತ್ತಾ? - Stock Market