ಬೆಂಗಳೂರು: ರೌಡಿಶೀಟರ್ ಮೇಲೆ ಗುಂಡು ಹಾರಿಸಿ ಹತ್ಯೆಗೈದು, ಮೃತದೇಹವನ್ನು ಸುಟ್ಟುಹಾಕಲು ಯತ್ನಿಸಿದ್ದ ಪ್ರಕರಣದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ಅಮೃತಸರ ಬಳಿ ಬ್ರಿಜೇಶ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಜನವರಿ 10ರಂದು ಬಾಗಲೂರು ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಗುಣಶೇಖರ (30) ಎಂಬ ರೌಡಿಶೀಟರ್‌ನನ್ನು ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಪತಿ ನಾಪತ್ತೆಯಾಗಿದ್ದಾನೆ ಎಂದು ಗುಣಶೇಖರನ ಪತ್ನಿ ಜೋಸ್ಪಿನ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಂಡಿದ್ದರು. ಬಳಿಕ ತಮಿಳುನಾಡಿನ ಪೆನ್ನಾಗರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಣಶೇಖರನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಭಾರತೀನಗರ ಠಾಣೆಯ ರೌಡಿಶೀಟರ್ ಆಗಿರುವ ಬ್ರಿಜೇಶ್, ಪಂಜಾಬ್‌ನಲ್ಲಿ ನಕಲಿ ಚಿನ್ನ ತಂದು ಅದನ್ನು ಬಾಗಲೂರು ಠಾಣೆಯ ರೌಡಿಶೀಟರ್ ಗುಣಶೇಖರನ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಅದೇ ರೀತಿ ತಂದ ನಕಲಿ ಚಿನ್ನವನ್ನು ಬ್ರಿಜೇಶ್ ಹಾಗೂ ಗುಣಶೇಖರ ಸೇರಿ ಗಣಶೇಖರನ ಸಂಬಂಧಿಯೊಬ್ಬರ ಮೂಲಕ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟು ಹಣ ಪಡೆದುಕೊಂಡಿದ್ದರು. ನಕಲಿ ಚಿನ್ನವೆಂದು ತಿಳಿದ ಬಳಿಕ ಫೈನಾನ್ಸ್ ಕಂಪನಿಯವರು ಹಣ ವಾಪಸ್ ಮಾಡಿ, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಗುಣಶೇಖರನ ಸಂಬಂಧಿಗೆ ತಾಕೀತು ಮಾಡಿದ್ದರು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಕಂಗಾಲಾಗಿದ್ದ ಗುಣಶೇಖರ, ಹಣ ನೀಡುವಂತೆ ಬ್ರಿಜೇಶ್ನ ಮೇಲೆ ಒತ್ತಡ ಹೇರಲಾರಂಭಿಸಿದ್ದ. ಅಲ್ಲದೆ ಬ್ರಿಜೇಶ್ ನಡೆಸುತ್ತಿದ್ದ ನಕಲಿ ಚಿನ್ನದ ವಹಿವಾಟಿನ ಕುರಿತು ಇತರರ ಬಳಿ ಹೇಳಿಕೊಂಡು ತಿರುಗಾಡಲಾರಂಭಿಸಿದ್ದ. ಈ ಎಲ್ಲಾ ಕಾರಣಗಳಿಂದ ಕೋಪಗೊಂಡಿದ್ದ ಬ್ರಿಜೇಶ್, ಜನವರಿ 10ರಂದು ಹಣ ಕೊಡುವುದಾಗಿ ಬಾಗಲೂರು ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗೆ ಗುಣಶೇಖರನನ್ನು ಕರೆಸಿಕೊಂಡಿದ್ದ. ಬಳಿಕ ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದ. ನಂತರ ತನ್ನ ಸಹಚರನನ್ನು ಕರೆಸಿಕೊಂಡು ಕಾರಿನಲ್ಲಿ ಗುಣಶೇಖರನ ಮೃತದೇಹವನ್ನು ತಮಿಳುನಾಡಿನ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬೆಂಕಿಯಿಟ್ಟಿದ್ದ.
ಗುಣಶೇಖರನ ಮೃತದೇಹ ಪತ್ತೆಯಾದ ಬಳಿಕ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಕೃತ್ಯದ ಬಳಿಕ ಮತ್ತೆ ನಕಲಿ ಚಿನ್ನದ ವಹಿವಾಟು ನಡೆಸಲು ಅಮೃತಸರಕ್ಕೆ ತೆರಳಿದ್ದ ಬ್ರಿಜೇಶ್ನನ್ನು ಸದ್ಯ ಬಂಧಿಸಲಾಗಿದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸಜೀತ್.ವಿ.ಜೆ ತಿಳಿಸಿದ್ದಾರೆ.
ಇದನ್ನೂ ಓದಿ: ಪರಸ್ಪರ ಕಲಹದಿಂದ ಮನೆ ತೊರೆದ ದಂಪತಿ: ಬಾಗಿಲು ಮುರಿದು ಚಿನ್ನಾಭರಣ ದೋಚಿದ ಕಳ್ಳನ ಬಂಧನ