ನವದೆಹಲಿ: ದಿಲ್ಲಿಯ ಮಧ್ಯಮ ವರ್ಗದ ಜನರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಇತರ ಪಕ್ಷಗಳು ಸೃಷ್ಟಿಸಿರುವ ನೋಟ್ ಬ್ಯಾಂಕ್ ಮತ್ತು ವೋಟ್ ಬ್ಯಾಂಕ್ ನಡುವೆ ಮಧ್ಯಮ ವರ್ಗದವರು ಎಲ್ಲಿಯೂ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಪಟ್ಟಿ ಮಾಡಿದ ಅವರು, ಮಧ್ಯಮ ವರ್ಗವು ತೆರಿಗೆ ಭಯೋತ್ಪಾದನೆಗೆ ಬಲಿಯಾಗಿದೆ ಎಂದು ಪ್ರತಿಪಾದಿಸಿದರು.
"ಕೆಲವು ಪಕ್ಷಗಳು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ತಮ್ಮ ವೋಟ್ ಬ್ಯಾಂಕ್ ಅನ್ನು ಸೃಷ್ಟಿಸಿಕೊಂಡಿವೆ ಮತ್ತು ಇನ್ನು ಕೆಲ ಪಕ್ಷಗಳು ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತ ಅವರಿಂದ ದೇಣಿಗೆಗಳನ್ನು ಪಡೆಯುತ್ತವೆ. ಆದರೆ ಈ ನೋಟ್ ಬ್ಯಾಂಕ್ (ಕೈಗಾರಿಕೋದ್ಯಮಿಗಳು) ಮತ್ತು ವೋಟ್ ಬ್ಯಾಂಕ್ (ಇತರರು) ನಡುವೆ ಮಧ್ಯಮ ವರ್ಗ ಕಾಣಿಸುತ್ತಿಲ್ಲ. ಇವುಗಳ ಮಧ್ಯೆ ಮಧ್ಯಮ ವರ್ಗವು ತುಳಿತಕ್ಕೊಳಗಾಗಿದೆ. ಭಾರತದ ಮಧ್ಯಮ ವರ್ಗವು ಸರ್ಕಾರದ ಎಟಿಎಂ ಆಗಿ ಮಾರ್ಪಟ್ಟಿದೆ. ಭಾರತೀಯ ಮಧ್ಯಮ ವರ್ಗವು ತೆರಿಗೆ ಭಯೋತ್ಪಾದನೆಗೆ ಬಲಿಯಾಗಿದೆ ಎಂಬುದು ಸತ್ಯ" ಎಂದು ಕೇಜ್ರಿವಾಲ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
"ಇದೇ ಕಾರಣದಿಂದಾಗಿ ಅನೇಕರು ದೇಶವನ್ನೇ ತೊರೆಯುತ್ತಿದ್ದಾರೆ. 2023 ರಲ್ಲಿಯೇ (ಸರಿಸುಮಾರು) 2.16 ಲಕ್ಷ ಜನರು ದೇಶವನ್ನು ತೊರೆದಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದರು. "ನಾವು ಮಧ್ಯಮ ವರ್ಗದ ಶಿಕ್ಷಣ ಬಜೆಟ್ ಅನ್ನು ಹೆಚ್ಚಿಸಿದ್ದೇವೆ, ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಕಡಿಮೆ ಮಾಡಿದ್ದೇವೆ, ಚುನಾವಣೆಯ ನಂತರ ನಾವು ವೃದ್ಧರಿಗೆ ಉಚಿತ ಚಿಕಿತ್ಸೆಗಾಗಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತರುತ್ತೇವೆ" ಎಂದು ಅವರು ತಿಳಿಸಿದರು.
ಎಎಪಿ ಮಧ್ಯಮ ವರ್ಗದ ಧ್ವನಿಯಾಗಲಿದೆ ಎಂದು ಭರವಸೆ ನೀಡಿದ ಕೇಜ್ರಿವಾಲ್, ಎರಡು ವಾರಗಳ ನಂತರ ನಡೆಯಲಿರುವ ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದಲ್ಲಿ ತಮ್ಮ ಪಕ್ಷವು ಮಧ್ಯಮ ವರ್ಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಲಿದೆ ಎಂದು ಹೇಳಿದರು. ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಇಟ್ಟಿರುವ ಕೇಜ್ರಿವಾಲ್, ಮುಂದಿನ ಬಜೆಟ್ ಅಧಿವೇಶನವನ್ನು ಮಧ್ಯಮ ವರ್ಗದವರ ಚರ್ಚೆಗಾಗಿಯೇ ಮೀಸಲಿಡಬೇಕು ಎಂದು ಒತ್ತಾಯಿಸಿದರು.
"ದೇಶದ ಮುಂದಿನ ಬಜೆಟ್ ಅನ್ನು ಮಧ್ಯಮ ವರ್ಗಕ್ಕೆ ಮೀಸಲಿಡಬೇಕೆಂದು ನಾವು ಒತ್ತಾಯಿಸುತ್ತೇವೆ. ಇಂದು ನಾನು ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಇಡುತ್ತಿದ್ದೇನೆ. ಕೇಂದ್ರವು ಶಿಕ್ಷಣ ಬಜೆಟ್ ಅನ್ನು ಶೇಕಡಾ 2 ರಿಂದ 10 ಕ್ಕೆ ಹೆಚ್ಚಿಸಬೇಕು. ಖಾಸಗಿ ಶಾಲೆಗಳಲ್ಲಿನ ಶುಲ್ಕವನ್ನು ನಿಯಂತ್ರಿಸಬೇಕು. ಉನ್ನತ ಶಿಕ್ಷಣಕ್ಕಾಗಿ ಸಬ್ಸಿಡಿ ಮತ್ತು ವಿದ್ಯಾರ್ಥಿವೇತನಗಳನ್ನು ಒದಗಿಸಬೇಕು" ಎಂದು ಅವರು ಹೇಳಿದರು.