ಯಾದಗಿರಿ: ಶಹಾಪುರ ನಗರದಲ್ಲಿ ಖತರ್ನಾಕ್ ಖದೀಮರು ಗ್ರಾಹಕರ ಸೋಗಿನಲ್ಲಿ ಬಂದು ನಕಲಿ ಫೋನ್ ಪೇ ಅಪ್ಲಿಕೇಷನ್ ಮೂಲಕ ಅಂಗಡಿ ಮಾಲೀಕರ ಫೋನ್ ಪೇ ಕ್ಯೂಆರ್ ಕೋಡ್ನ್ನು ಸ್ಕ್ಯಾನ್ ಮಾಡಿ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ನಗರದ ಇಂಡಸ್ಟ್ರಿಯಲ್ ಏರಿಯಾದ ಬಳಿ ಇರುವ ರೇಣುಕಾ ವೈನ್ ಶಾಪ್ ಮಾಲೀಕ ಉಮೇಶ್ ಕಟ್ಟಿಮನಿ ಅವರಿಗೆ ಕಳೆದ ನವೆಂಬರ್(2024) ತಿಂಗಳಿನಿಂದ ಇಲ್ಲಿವರೆಗೆ ಬರೋಬ್ಬರಿ 3 ರಿಂದ 3.80 ಲಕ್ಷ ರೂ. ಗಳವರೆಗೆ ಖದೀಮರು ಪಂಗನಾಮ ಹಾಕಿದ್ದಾರೆ. ಜ.15, 2025 ರಂದು ವೈನ್ ಶಾಪಿಗೆ ಗ್ರಾಹಕರ ಸೋಗಿನಲ್ಲಿ ಬಂದವರು 2,600, 3,640 ಹಾಗೂ 810 ರೂ.ಗಳ ಮೊತ್ತದ ವಿವಿಧ ವೈನ್ ಒಂದೇ ದಿನ ಖರೀದಿಸಿದ್ದಾರೆ. ಈ ಪ್ರಕರಣದಲ್ಲಿ ಮೂರು ಜನ ಅಪ್ರಾಪ್ತ ಬಾಲಕರು ಹಾಗೂ ಓರ್ವ ಯುವಕನನ್ನು ಹಿಡಿದು ಖುದ್ದಾಗಿ ವೈನ್ ಶಾಪ್ ಮಾಲೀಕರೇ ಪೊಲೀಸರಿಗೆ ಒಪ್ಪಿಸಿದ್ದಾರೆ.
"ನಕಲಿ ಫೋನ್ ಪೇ ಮೂಲಕ ವ್ಯಾಪಾರಸ್ಥರನ್ನು ವಂಚಿಸುವ ಗ್ಯಾಂಗೊಂದು ನಗರದಲ್ಲಿ ಸಕ್ರಿಯವಾಗಿದೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಇಂಥ ಘಟನೆ ಮರುಕಳಿಸದಂತೆ ತಡೆಯಲು ಪೊಲೀಸ್ ಇಲಾಖೆ ಒಬ್ಬರಿಂದ ಸಾಧ್ಯವಿಲ್ಲ. ಆದರೆ, ಇದಕ್ಕೆ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ. ಆದರೂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಹಲವು ಅನುಮಾನಗಳು ಮೂಡುತ್ತಿವೆ" ಎಂದು ಜಿಲ್ಲಾ ದಲಿತ ಮುಖಂಡ ನಿಂಗಣ್ಣ ನಾಟೇಕಾರ ತಿಳಿಸಿದ್ದಾರೆ.
"ತೆರೆ ಮರೆಯಲ್ಲಿ ಇದ್ದುಕೊಂಡು ಚಿಕ್ಕ ಮಕ್ಕಳಿಗೆ ಅಮಿಷವೊಡ್ಡಿ 12-14 ವರ್ಷದ ಮಕ್ಕಳಿಗೆ ತಮ್ಮ ಪಾಲಕರ ಮೊಬೈಲ್ ತರುವಂತೆ ಹೇಳಿ ಆ ಮೊಬೈಲ್ನಲ್ಲಿ ಹೇಗೆ ವಂಚನೆ ಮಾಡಬೇಕು ಎಂಬುದರ ಬಗ್ಗೆ ತರಬೇತಿ ಕೊಟ್ಟು, ಗ್ರಾಹಕರು ಹೆಚ್ಚು ಇರುವಾಗ ಅಂಗಡಿಗಳಿಗೆ ಕಳುಹಿಸಿ, ಈ ದುಷ್ಕೃತ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ" ಎಂದು ನಾಗರಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.
"ಫೋನ್ ಪೇ ಮೂಲಕ ವಂಚಿಸಿರುವುದು ನನ್ನ ಗಮನಕ್ಕೆ ಬಂದಿದೆ. ಶಹಾಪುರ ಪೊಲೀಸರಿಗೆ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಜನರಿಗೆ ಮೋಸ ಹೋಗದಂತೆ ಇದರ ಬಗ್ಗೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ಪ್ರಕರಣದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ಈ ಬಗ್ಗೆ ಸ್ವತಃ ವಂಚನೆಗೆ ಒಳಗಾದ ರೇಣುಕಾ ವೈನ್ ಶಾಪ್ ಮಾಲೀಕ ಉಮೇಶ್ ಕಟ್ಟಿಮನಿ ಮಾತನಾಡಿ, "ಕಳೆದೆರಡು ಮೂರು ತಿಂಗಳಿಂದ ನಮ್ಮ ವೈನ್ ಶಾಪ್ ನಲ್ಲಿ ನಕಲಿ ಫೋನ್ ಪೇ ಮೂಲಕ 3 ರಿಂದ 3.50 ಲಕ್ಷ ರೂ.ಗಳವರೆಗೆ ವಂಚನೆ ನಡೆದಿದೆ. ಇದರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಿದರೆ, ಇನ್ನೊಬ್ಬರು ಮೋಸ ಹೋಗುವುದಿಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟೆಕ್ಕಿಯ ಬೈಕ್ ಕದ್ದು ಇನ್ನಾರಿಗೋ ಮಾರಾಟ; 2 ವರ್ಷದಿಂದ ಮಾಲೀಕನಿಗೆ ಬರುತ್ತಿವೆ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್!