ಕರ್ನಾಟಕ

karnataka

ETV Bharat / business

ಬೆಂಗಳೂರಿನಲ್ಲಿ ಕನಿಷ್ಠ ನಿರುದ್ಯೋಗ, ಹೈದರಾಬಾದ್ ವೇಗವಾಗಿ ಬೆಳೆಯುತ್ತಿರುವ ನಗರ: ಪ್ರೈಮ್ ಸಿಟಿ ಇಂಡೆಕ್ಸ್ ವರದಿ

ರಿಯಲ್ ಎಸ್ಟೇಟ್ ಬೆಳವಣಿಗೆಯಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಕನಿಷ್ಠ ನಿರುದ್ಯೋಗ, ಹೈದರಾಬಾದ್ ವೇಗವಾಗಿ ಬೆಳೆಯುತ್ತಿರುವ ನಗರ: ಪ್ರೈಮ್ ಸಿಟಿ ಇಂಡೆಕ್ಸ್ ವರದಿ
ಬೆಂಗಳೂರಿನಲ್ಲಿ ಕನಿಷ್ಠ ನಿರುದ್ಯೋಗ, ಹೈದರಾಬಾದ್ ವೇಗವಾಗಿ ಬೆಳೆಯುತ್ತಿರುವ ನಗರ: ಪ್ರೈಮ್ ಸಿಟಿ ಇಂಡೆಕ್ಸ್ ವರದಿ (IANS)

By ETV Bharat Karnataka Team

Published : 4 hours ago

ಮುಂಬೈ:ಭಾರತದ ಆರು ಪ್ರಮುಖ ನಗರಗಳ ಪೈಕಿ ಹೈದರಾಬಾದ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಹೊರಹೊಮ್ಮಿದೆ ಎಂದು ವರದಿಯೊಂದು ತಿಳಿಸಿದೆ. ಏತನ್ಮಧ್ಯೆ, ಮುಂಬೈ-ಎಂಎಂಆರ್ ಎಲ್ಲಾ ಮಾನದಂಡಗಳಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಾಯ್ದುಕೊಂಡಿದೆ ಮತ್ತು ಭಾರತದ ಆರ್ಥಿಕ ರಾಜಧಾನಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇನ್ನು ದೆಹಲಿ-ಎನ್​​ಸಿಆರ್ ತನ್ನ ಉನ್ನತ ಭೌತಿಕ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ವಿಷಯದಲ್ಲಿ ಅತ್ಯುನ್ನತ ಸ್ಥಾನದಲ್ಲಿದೆ ಎಂದು ನೈಟ್ ಫ್ರಾಂಕ್ ಇಂಡಿಯಾದ 'ಇಂಡಿಯಾ ಪ್ರೈಮ್ ಸಿಟಿ ಇಂಡೆಕ್ಸ್' ವರದಿ ತಿಳಿಸಿದೆ.

ಮತ್ತೊಂದೆಡೆ, ಬೆಂಗಳೂರು ಗಮನಾರ್ಹ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಬೆಂಗಳೂರಿನ ಸೇವಾ ವಲಯ ತೀವ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದ್ದು, ಇದು ಭಾರತ ಮತ್ತು ಹೊರದೇಶಗಳ ಹೆಚ್ಚು ನುರಿತ ಉದ್ಯೋಗಿಗಳನ್ನು ಆಕರ್ಷಿಸುತ್ತಿದೆ.

ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿ ರೂಪಾಂತರಗೊಂಡ ಆಯ್ದ ನಗರಗಳ ಅಸಾಧಾರಣ ಕಾರ್ಯಕ್ಷಮತೆಯಿಂದ ಭಾರತವು ಜಾಗತಿಕ ಆರ್ಥಿಕ ಶಕ್ತಿಕೇಂದ್ರವಾಗಿ ಹೊರಹೊಮ್ಮಿದೆ. ದೇಶದಲ್ಲಿ ಸುಸ್ಥಿರ ಮತ್ತು ಅಂತರ್ಗತ ನಗರಾಭಿವೃದ್ಧಿಯನ್ನು ಉತ್ತೇಜಿಸಲು ಆರು ನಗರಗಳ ಪೈಕಿ ಪ್ರತಿಯೊಂದು ನಗರವೂ ವಿಭಿನ್ನ ಅವಕಾಶಗಳನ್ನು ಹೊಂದಿದೆ" ಎಂದು ನೈಟ್ ಫ್ರಾಂಕ್ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಗುಲಾಮ್ ಜಿಯಾ ಹೇಳಿದರು.

ಹೈದರಾಬಾದ್​ನ ಸಾಮರ್ಥ್ಯವು ಅದರ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಕೇಂದ್ರೀಕೃತವಾಗಿದೆ. ರಿಯಲ್ ಎಸ್ಟೇಟ್ ನಿಯತಾಂಕದಲ್ಲಿ ಆರು ನಗರಗಳ ಪೈಕಿ ಹೈದರಾಬಾದ್ ಅತಿ ಹೆಚ್ಚು ಅಂಕಗಳನ್ನು ಗಳಿಸಿದೆ. ಹೈದರಾಬಾದ್​ನಲ್ಲಿ ಕಳೆದ ದಶಕದಲ್ಲಿ ವಸತಿ ಕಟ್ಟಡಗಳ ನಿರ್ಮಾಣವು ಶೇಕಡಾ 10 ರಷ್ಟು (ಸಿಎಜಿಆರ್) ಅತ್ಯಧಿಕ ಬೆಳವಣಿಗೆಯಾಗಿದೆ.

ರಿಯಲ್ ಎಸ್ಟೇಟ್​ನಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೂ, ವಸತಿ ರಿಯಲ್ ಎಸ್ಟೇಟ್​ನಲ್ಲಿ ನಿರಂತರ ಬೆಳವಣಿಗೆಯೊಂದಿಗೆ ವಾಣಿಜ್ಯ ಕಂಪನಿಗಳಿಗೆ ಅಗ್ರ ಆಯ್ಕೆಯಾಗಿ ಮುಂದುವರೆದಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನ ಜನಸಂಖ್ಯೆಯ ಅತ್ಯಧಿಕ ಶೇಕಡಾ 76ರಷ್ಟು ಜನ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಇಲ್ಲಿ ಕೇವಲ ಶೇ 1.8ರಷ್ಟು ನಿರುದ್ಯೋಗ ದರವಿದೆ. ಸಮೀಕ್ಷೆ ಮಾಡಲಾದ ಆರು ನಗರಗಳ ಪೈಕಿ ಬೆಂಗಳೂರಿನ ನಿರುದ್ಯೋಗ ದರ ಅತ್ಯಂತ ಕನಿಷ್ಠವಾಗಿದೆ.

ಭೌತಿಕ ಮೂಲಸೌಕರ್ಯದಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ. ಭಾರತದ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ದೆಹಲಿ ಮೆಟ್ರೋಗಳಲ್ಲಿ ಪ್ರತಿದಿನ 6.8 ಮಿಲಿಯನ್ ಪ್ರಯಾಣಿಕರು ಸಂಚರಿಸುತ್ತಾರೆ ಮತ್ತು ಇಲ್ಲಿನ ಮೆಟ್ರೊ ಜಾಲವು 350 ಕಿ.ಮೀ.ಗಿಂತಲೂ ಹೆಚ್ಚು ವ್ಯಾಪಿಸಿದೆ.

ಇದನ್ನೂ ಓದಿ : ಜಿ20 ರಾಷ್ಟ್ರಗಳ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಂ. 1: ಶೇ.7ರಷ್ಟು ಬೆಳವಣಿಗೆ ಅಂದಾಜು

ABOUT THE AUTHOR

...view details