ಮುಂಬೈ: ದುರ್ಬಲ ಜಾಗತಿಕ ಸೂಚನೆಗಳು, ಅಮೆರಿಕ ವ್ಯಾಪಾರ ನೀತಿಗಳ ಬಗ್ಗೆ ಅನಿಶ್ಚಿತತೆ ಮತ್ತು ನಿರಂತರ ವಿದೇಶಿ ನಿಧಿಯ ಹೊರಹರಿವಿನ ನಡುವೆ ಭಾರತದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಭಾರಿ ಮಾರಾಟದ ಒತ್ತಡವನ್ನು ಎದುರಿಸಿದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಸೋಮವಾರ ತೀವ್ರ ಕುಸಿತಕ್ಕೆ ಸಾಕ್ಷಿಯಾಯಿತು.
ಕೊಲಂಬಿಯಾದಿಂದ ಅಮೆರಿಕಕ್ಕೆ ಪೂರೈಕೆಯಾಗುವ ಎಲ್ಲ ಸರಕುಗಳ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು ಈ ಕುಸಿತಕ್ಕೆ ಕಾರಣವಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಯುಎಸ್ ಮಿಲಿಟರಿ ಗಡೀಪಾರು ವಿಮಾನಗಳನ್ನು ನಿರ್ಬಂಧಿಸುವ ಕೊಲಂಬಿಯಾದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಕೈಗೊಂಡ ಈ ನಿರ್ಧಾರವು ಜಾಗತಿಕ ಸುಂಕ ಹೇರಿಕೆ ಯುದ್ಧವನ್ನು ಹೆಚ್ಚಿಸುವ ಆತಂಕ ಮೂಡಿಸಿದೆ. ಜನವರಿ 28-29ರಂದು ನಡೆಯಲಿರುವ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್ಒಎಂಸಿ) ಸಭೆಯ ಬಗ್ಗೆ ಕೂಡ ಜಾಗರೂಕವಾಗಿ ಗಮನಿಸಲಾಗುತ್ತಿದೆ.
ಸಂಭವನೀಯ ದರ ಕಡಿತದ ಊಹಾಪೋಹ, ಕುಸಿತ: ಈ ಸಭೆಯಲ್ಲಿ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬಹುದು ಎಂದು ವಿಶ್ಲೇಷಕರು ಊಹಿಸಿದರೆ, ವಿಸ್ತೃತ ತೆರಿಗೆ ಕಡಿತ ಮತ್ತು ಸುಂಕಗಳು ಸೇರಿದಂತೆ ಟ್ರಂಪ್ ಅವರ ಆರ್ಥಿಕ ನೀತಿಗಳ ಬಗೆಗಿನ ಕಳವಳಗಳ ಮಧ್ಯೆ ಮಾರ್ಚ್ನಲ್ಲಿ ಸಂಭವನೀಯ ದರ ಕಡಿತದ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿವೆ.
ವಿದೇಶಿ ನಿಧಿಯ ಹೊರಹರಿವು ಮತ್ತು ಭಾರತೀಯ ಕಂಪನಿಗಳಿಂದ ಮೂರನೇ ತ್ರೈಮಾಸಿಕದ ಆದಾಯವು ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಹೆಚ್ಚುವರಿಯಾಗಿ, ಚೀನಾದ ಡೀಪ್ ಸೀಕ್ನ ವೆಚ್ಚ- ಪರಿಣಾಮಕಾರಿ ಎಐ ಮಾದರಿಯು ಎನ್ವಿಡಿಯಾ ಮತ್ತು ಗೂಗಲ್ ನಂತಹ ಟೆಕ್ ಕಂಪನಿಗಳ ವ್ಯವಹಾರಕ್ಕೆ ಅಡ್ಡಿಪಡಿಸಬಹುದು ಎಂಬ ಆತಂಕಗಳು ಅನಿಶ್ಚಿತತೆ ಹೆಚ್ಚಿಸಿವೆ.
ಷೇರು ಮಾರುಕಟ್ಟೆ ಕುಸಿತ: ಸೋಮವಾರದ ವಹಿವಾಟಿನಲ್ಲಿ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 824.26 ಪಾಯಿಂಟ್ ಅಥವಾ ಶೇಕಡಾ 1.08 ರಷ್ಟು ಕುಸಿದು 75,366.17 ರಲ್ಲಿ ಕೊನೆಗೊಂಡಿದೆ. ಇನ್ನು ನಿಫ್ಟಿ ಶೇಕಡಾ 1.14 ರಷ್ಟು ಕುಸಿದು 22,829.15 ರಲ್ಲಿ ಕೊನೆಗೊಂಡಿದೆ. ಇನ್ನು ಷೇರು ಮಾರುಕಟ್ಟೆಗಳಿಗೆ ಜಾಗತಿಕ ಮಾರುಕಟ್ಟೆಗಳು ಕೂಡ ಕಡಿಮೆ ಬೆಂಬಲವನ್ನು ಒದಗಿಸಿದವು. ಯುಎಸ್ ಸ್ಟಾಕ್ ಫ್ಯೂಚರ್ಸ್ ಏಷ್ಯಾದ ವಹಿವಾಟಿನ ಸಮಯದಲ್ಲಿ ನಷ್ಟದೊಂದಿಗೆ ವಹಿವಾಟು ನಡೆಸಿತು. ಎಸ್ &ಪಿ 500 ಫ್ಯೂಚರ್ಸ್ ಶೇಕಡಾ 1 ರಷ್ಟು ಕುಸಿದರೆ, ನಾಸ್ಡಾಕ್ 100 ಫ್ಯೂಚರ್ಸ್ ಶೇಕಡಾ 1.9 ರಷ್ಟು ಕುಸಿದಿದೆ.
ಏಷ್ಯಾದ ಮಾರುಕಟ್ಟೆಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ. ಹಾಂಕಾಂಗ್ ನ ಹಾಂಗ್ ಸೆಂಗ್ ಟೆಕ್ ಸೂಚ್ಯಂಕ ಶೇ 2ರಷ್ಟು ಏರಿಕೆಯಾದರೆ, ಜಪಾನ್ ನ ನಿಕೈ 225 ಸೂಚ್ಯಂಕ ಶೇ 0.6 ರಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ : ಫೆ.28ಕ್ಕೆ ಸೆಬಿ ಅಧ್ಯಕ್ಷೆ ಮಾಧಬಿ ಅಧಿಕಾರಾವಧಿ ಅಂತ್ಯ: ಹೊಸ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಆರಂಭ - SEBI CHIEF