ಹಾವೇರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳ ಮೇಲೆ ಆರೋಪ, ಸಂಶಯಗಳು ವ್ಯಕ್ತವಾಗುತ್ತಿದ್ದು, ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು.
ಬುಧವಾರ ಹಾವೇರಿಯ ಖಾಸಗಿ ಕಾಲೇಜಿನ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ತನಿಖಾ ಸಂಸ್ಥೆಗಳ ಮೇಲೆ ಆರೋಪಗಳು ಬಂದಿವೆ. ಆದರೆ ಸಾಬೀತಾಗಿಲ್ಲ ಎಂದು ತಿಳಿಸಿದರು. ಕೇಂದ್ರದ ಅಧೀನದಲ್ಲಿರುವ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರ ಆರೋಪ ಮಾಡುತ್ತದೆ. ರಾಜ್ಯದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮೇಲೆ ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಈ ಆರೋಪಗಳ ಕುರಿತು ಗಂಭೀರವಾದ ಚರ್ಚೆ, ವಿಚಾರಣೆಗಳು ನಡೆಯಬೇಕು. ಸ್ವತಂತ್ರ ತನಿಖಾ ಸಂಸ್ಥೆಯೊಂದು ಸ್ಥಾಪನೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ರಾಜಕೀಯ ನಾಯಕರ ಆರೋಪಗಳಲ್ಲಿ ಹುರುಳು ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಜನರ ಮನಸ್ಸಿನಲ್ಲಂತೂ ಸಂಶಯದ ಭಾವನೆ ಮೂಡಿದೆ. ಈ ಸಂಶಯ ನಿವಾರಣೆಗೆ ಒಂದು ದಾರಿ ಹುಡುಕಬೇಕು ಎಂದು ಹೇಳಿದರು. ಅಲ್ಲದೇ ಆರೋಪಗಳು ಬಂದಾಗ ಸಚಿವರು ರಾಜೀನಾಮೆ ಕೊಟ್ಟ ಉದಾಹರಣೆಗಳಿವೆ. ಆದರೆ ರಾಜೀನಾಮೆ ಕೊಡುವುದು ಎಷ್ಟು ಸಮಂಜಸ ಎಂಬುದರ ಬಗ್ಗೆ ಸಹ ಚರ್ಚೆ ನಡೆಯಬೇಕು. ಆರೋಪಗಳು ಬಂದಾಗ ರಾಜೀನಾಮೆ ಕೊಡುವುದು ರಾಜಕೀಯದಲ್ಲಿ ಒಂದು ಪದ್ಧತಿಯಾಗಿದೆ. ರಾಜೀನಾಮೆ ಕೊಟ್ಟರೆ ಜನರ ಮೇಲೆ ನಂಬಿಕೆ ಜಾಸ್ತಿ ಆಗುತ್ತದೆ. ರಾಜೀನಾಮೆ ಕೊಡಬೇಕು ಎನ್ನುವುದು ಕಾನೂನಿನಲ್ಲಿ ಇಲ್ಲ. ಕೊಟ್ಟರೆ ಗೌರವ, ನಂಬಿಕೆ ಜಾಸ್ತಿ ಆಗುತ್ತದೆ ಎಂದು ನ್ಯಾ. ಹೆಗಡೆ ತಿಳಿಸಿದರು.
ಇದನ್ನೂ ಓದಿ: ಮಂಗಳಮುಖಿಯರಿಂದ 'ಅಕ್ಕ' ಕೆಫೆ ನಿರ್ವಹಣೆ: ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ