ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸೋಮವಾರ ದೆಹಲಿ - ಲಂಡನ್ ಹೀಥ್ರೂ ಮಾರ್ಗದಲ್ಲಿ ಹೊಸ ಏರ್ ಬಸ್ ಎ 350-900 ವಿಮಾನಯಾನವನ್ನು ಆರಂಭಿಸಿದೆ. ಎ 350 ವಿಮಾನವು ಬಿಸಿನೆಸ್ ಕ್ಲಾಸ್ನಲ್ಲಿ ಪೂರ್ಣ-ಫ್ಲಾಟ್ ಹಾಸಿಗೆಗಳನ್ನು ಹೊಂದಿರುವ 28 ಖಾಸಗಿ ಸೂಟ್ಗಳನ್ನು, ಮೀಸಲಾದ ಪ್ರೀಮಿಯಂ ಎಕಾನಮಿ ಕ್ಯಾಬಿನ್ನಲ್ಲಿ ಆರಾಮದಾಯಕ ಲೆಗ್ ರೂಮ್ ಹೊಂದಿರುವ 24 ಆಸನಗಳು ಮತ್ತು ಎಕಾನಮಿ ಕ್ಲಾಸ್ನಲ್ಲಿ 264 ವಿಶಾಲವಾದ ಆಸನಗಳನ್ನು ಹೊಂದಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಪ್ರಸ್ತುತ ವಾರದಲ್ಲಿ ಸಂಚರಿಸುತ್ತಿರುವ 17 ಬೋಯಿಂಗ್ 777-300 ಇಆರ್ ಮತ್ತು ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನಗಳ ಪೈಕಿ 14 ವಿಮಾನಗಳ ಜಾಗದಲ್ಲಿ ಎ 350-900 ವಿಮಾನಗಳು ಇನ್ನು ಮುಂದೆ ಸಂಚರಿಸಲಿವೆ. ಇದರ ಪರಿಣಾಮವಾಗಿ, ದೆಹಲಿ - ಲಂಡನ್ ಹೀಥ್ರೂ ಮಾರ್ಗದಲ್ಲಿ ಪ್ರತಿ ವಾರ ಹೆಚ್ಚುವರಿ 336 ಸೀಟುಗಳು ಲಭ್ಯವಾಗಲಿವೆ ಎಂದು ಕಂಪನಿ ತಿಳಿಸಿದೆ.
"ದೆಹಲಿ - ಲಂಡನ್ ಹೀಥ್ರೂ ಮಾರ್ಗದಲ್ಲಿ ಪ್ರಮುಖ ಏರ್ ಬಸ್ ಎ 350-900 ವಿಮಾನಗಳ ನಿಯೋಜನೆಯು ಏರ್ ಇಂಡಿಯಾಕ್ಕೆ ಮಹತ್ವದ ಮೈಲಿಗಲ್ಲಾಗಿದೆ. ನಮ್ಮ ಅತಿಥಿಗಳ ಪ್ರಯಾಣದ ಅನುಭವವನ್ನು ನಿಜವಾಗಿಯೂ ವಿಶ್ವದರ್ಜೆಯ ಮಟ್ಟಕ್ಕೆ ಏರಿಸುವ ಏರ್ ಇಂಡಿಯಾದ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ" ಎಂದು ಏರ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ ಬೆಲ್ ವಿಲ್ಸನ್ ಹೇಳಿದರು.