ಕರ್ನಾಟಕ

karnataka

ETV Bharat / business

2022ರಲ್ಲಿ ಭಾರತಕ್ಕೆ ವಿದೇಶಗಳಿಂದ 111 ಶತಕೋಟಿ ಡಾಲರ್ ಹಣ ವರ್ಗಾವಣೆ: ವಿಶ್ವದಲ್ಲೇ ಇದು ಅತ್ಯಧಿಕ - Foreign Remittances - FOREIGN REMITTANCES

2022ರಲ್ಲಿ ಭಾರತಕ್ಕೆ ವಿದೇಶಗಳಿಂದ 111 ಶತಕೋಟಿ ಡಾಲರ್ ಹಣ ವರ್ಗಾವಣೆಯಾಗಿದೆ ಎಂದು ವಿಶ್ವಸಂಸ್ಥೆಯ ವಲಸೆ ವಿಭಾಗ ತಿಳಿಸಿದೆ.

India received over $111 billion in remittances
India received over $111 billion in remittances ((image : ians))

By PTI

Published : May 8, 2024, 7:56 PM IST

ವಿಶ್ವಸಂಸ್ಥೆ : 2022ರಲ್ಲಿ ಭಾರತಕ್ಕೆ ವಿದೇಶಗಳಿಂದ 111 ಶತಕೋಟಿ ಡಾಲರ್ ಹಣ ಕಳುಹಿಸಲಾಗಿದೆ ಎಂದು ವಿಶ್ವಸಂಸ್ಥೆಯ ವಲಸೆ ವಿಭಾಗ ತಿಳಿಸಿದೆ. ಭಾರತಕ್ಕೆ ವಿದೇಶಗಳಿಂದ ಬಂದ ಹಣ ಇದೇ ಮೊದಲ ಬಾರಿಗೆ 100 ಶತಕೋಟಿ ದಾಟಿದ್ದು, 111 ಶತಕೋಟಿ ಡಾಲರ್​ಗೆ ತಲುಪಿದ ವಿಶ್ವದ ಮೊದಲ ದೇಶವಾಗಿದೆ.

ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಮಂಗಳವಾರ ಬಿಡುಗಡೆ ಮಾಡಿದ ತನ್ನ ವಿಶ್ವ ವಲಸೆ ವರದಿ 2024 ರಲ್ಲಿ, 2022 ರಲ್ಲಿ ಭಾರತ, ಮೆಕ್ಸಿಕೊ, ಚೀನಾ, ಫಿಲಿಪ್ಪಿನ್ಸ್​​ ಮತ್ತು ಫ್ರಾನ್ಸ್ ಮೊದಲ ಐದು ಅತ್ಯಧಿಕ ಹಣ ಪಡೆದ ದೇಶಗಳಾಗಿವೆ ಎಂದು ಹೇಳಿದೆ.

"ಭಾರತವು 111 ಬಿಲಿಯನ್ ಯುಎಸ್​ ಡಾಲರ್​ಗಿಂತ ಹೆಚ್ಚು ಮೊತ್ತವನ್ನು ಸ್ವೀಕರಿಸುವ ಮೂಲಕ ಇತರ ಎಲ್ಲ ದೇಶಗಳನ್ನು ಹಿಂದಿಕ್ಕಿದೆ. ಅಲ್ಲದೇ ಇದು 100 ಬಿಲಿಯನ್ ಡಾಲರ್ ಗಡಿಯನ್ನು ತಲುಪಿದ ಮತ್ತು ದಾಟಿದ ಮೊದಲ ದೇಶವಾಗಿದೆ. 2022 ರಲ್ಲಿ ಮೆಕ್ಸಿಕೊ ಎರಡನೇ ಅತಿದೊಡ್ಡ ಹಣ ಸ್ವೀಕರಿಸಿದ ದೇಶವಾಗಿದೆ" ಎಂದು ವರದಿ ತಿಳಿಸಿದೆ.

ವರದಿಯ ಅಂಕಿ - ಅಂಶಗಳ ಪ್ರಕಾರ, ಭಾರತವು 2010 ರಲ್ಲಿ 53.48 ಬಿಲಿಯನ್ ಡಾಲರ್​, 2015 ರಲ್ಲಿ 68.91 ಬಿಲಿಯನ್ ಡಾಲರ್​ ಮತ್ತು 2020 ರಲ್ಲಿ 83.15 ಬಿಲಿಯನ್ ಡಾಲರ್​ ಹಣ ಸ್ವೀಕರಿಸುವ ಮೂಲಕ ಆಯಾ ವರ್ಷಗಳಲ್ಲಿ ಹಣ ಸ್ವೀಕರಿಸಿದ ಅಗ್ರ ದೇಶವಾಗಿತ್ತು. ಉಪಖಂಡ ಪ್ರದೇಶವು ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರನ್ನು ಹೊಂದಿದ್ದು, ದಕ್ಷಿಣ ಏಷ್ಯಾವು ಜಾಗತಿಕವಾಗಿ ಅತಿ ಹೆಚ್ಚು ಹಣ ವರ್ಗಾವಣೆಯನ್ನು ಪಡೆಯುತ್ತದೆ ಎಂದು ವರದಿ ತಿಳಿಸಿದೆ. ದಕ್ಷಿಣ ಏಷ್ಯಾದ ಮೂರು ದೇಶಗಳಾದ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿಶ್ವದಲ್ಲಿ ಅಂತಾರಾಷ್ಟ್ರೀಯ ಹಣ ರವಾನೆಯ ಮೂಲಕ ಹಣ ಸ್ವೀಕರಿಸುವ ಮೊದಲ ಹತ್ತು ದೇಶಗಳಲ್ಲಿ ಸ್ಥಾನ ಪಡೆದಿವೆ.

ಆದಾಗ್ಯೂ, ಈ ದೇಶಗಳ ವಲಸೆ ಕಾರ್ಮಿಕರು ಆರ್ಥಿಕ ಶೋಷಣೆ, ವಲಸೆ ವೆಚ್ಚಗಳಿಂದಾಗಿ ಅತಿಯಾದ ಸಾಲ, ವಿದೇಶೀಯ ದ್ವೇಷ ಮತ್ತು ಕೆಲಸದ ಸ್ಥಳದಲ್ಲಿ ದೌರ್ಜನ್ಯ ಸೇರಿದಂತೆ ಅಸಂಖ್ಯಾತ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್ ಮತ್ತು ಕತಾರ್​ನಲ್ಲಿ, ವಲಸಿಗರು ಕ್ರಮವಾಗಿ ರಾಷ್ಟ್ರೀಯ ಜನಸಂಖ್ಯೆಯ ಶೇಕಡಾ 88, ಸುಮಾರು 73 ಮತ್ತು 77 ರಷ್ಟಿದ್ದಾರೆ. ಈ ದೇಶಗಳಲ್ಲಿ ಭಾರತ, ಈಜಿಪ್ಟ್, ಬಾಂಗ್ಲಾದೇಶ, ಇಥಿಯೋಪಿಯಾ ಮತ್ತು ಕೀನ್ಯಾದಂತಹ ದೇಶಗಳಿಂದ ಬಂದ ಹೆಚ್ಚಿನ ವಲಸಿಗರು ನಿರ್ಮಾಣ, ಆತಿಥ್ಯ, ಭದ್ರತೆ, ಮನೆಕೆಲಸ ಮತ್ತು ಚಿಲ್ಲರೆ ವ್ಯಾಪಾರದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಮಾರು 18 ಮಿಲಿಯನ್ ಅಥವಾ ಒಟ್ಟು ಜನಸಂಖ್ಯೆಯ 1.3 ಪ್ರತಿಶತದಷ್ಟು ಜನಸಂಖ್ಯೆ ವಿದೇಶಗಳಲ್ಲಿರುವ ಮೂಲಕ ಭಾರತವು ವಿಶ್ವದ ಅತಿದೊಡ್ಡ ಸಂಖ್ಯೆಯ ಅಂತರರಾಷ್ಟ್ರೀಯ ವಲಸಿಗರ ಮೂಲವಾಗಿದೆ. ಈ ಪೈಕಿ ಹೆಚ್ಚಿನ ಭಾರತೀಯ ವಲಸಿಗರು ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಸ್ಟೇಟ್ಸ್ ಮತ್ತು ಸೌದಿ ಅರೇಬಿಯಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : ಕೆನರಾ ಬ್ಯಾಂಕ್​​ ಷೇರುದಾರರಿಗೆ ಬಂಪರ್​: ಪ್ರತಿ ಷೇರಿಗೆ 16 ರೂ. ಲಾಭಾಂಶ ಘೋಷಣೆ - CANARA BANK

ABOUT THE AUTHOR

...view details