ನವದೆಹಲಿ/ನೋಯ್ಡಾ: ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಮಾನುಷ ಘಟನೆಯೊಂದು ವರದಿಯಾಗಿವೆ. ಶುಕ್ರವಾರ-ಶನಿವಾರ ರಾತ್ರಿ ಯುವಕನೋರ್ವನಿಗೆ ಚಾಕುವಿನಿಂದ ಇರಿದು ನಂತರ ಆತನ ಕಾಲಿಗೆ ಹಗ್ಗ ಕಟ್ಟಿ ಬೈಕ್ ಮೇಲೆ ದುಷ್ಕರ್ಮಿಗಳು ಎಳೆದೊಯ್ದಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ಗೌತಮ್ ಬುದ್ಧ ನಗರದ ಸೆಕ್ಟರ್-49 ಬರೌಲಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಬೈಕ್ಗೆ ಕಟ್ಟಿ ಹಾಕಿ ಕಿಲೋಮೀಟರ್ಗಟ್ಟಲೇ ದೂರ ಎಳೆದೊಯ್ದು ಆರೋಪಿಗಳು ಅಟ್ಟಹಾಸ ಮೆರೆದಿದ್ದಾರೆ. ಇಡೀ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.
ಇದರಲ್ಲಿ ಮೃತ ಯುವಕನನ್ನು ಮೆಹಂದಿ ಹಸನ್ ಎಂದು ಗುರುತಿಸಲಾಗಿದೆ. ಬರೌಲಾ ಮೂಲದ ಅನುಜ್ ಮತ್ತು ನಿತಿನ್ ಎಂಬ ಆರೋಪಿಗಳೇ ಈ ದುಷ್ಕೃತ್ಯ ಎಸಗಿದ್ದಾರೆ. ಅನುಜ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಸಂಬಂಧಿಯಾದ ನಿತಿನ್ ಡೈರಿ ವ್ಯಾಪಾರ ಮಾಡುತ್ತಿದ್ದಾನೆ ಎಂದು ಎಂದು ತಿಳಿದುಬಂದಿದೆ. ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮೆಹಂದಿ ಹಸನ್ ಜೊತೆ ಅನುಜ್ ಮತ್ತು ನಿತಿನ್ ವಾಗ್ವಾದ ಉಂಟಾಗಿತ್ತು. ಬಳಿಕ ಆತನಿಗೆ ಚಾಕು ಇರಿದು ಮಾರಣಾಂತಿಕವಾಗಿ ದಾಳಿ ಮಾಡಿದ್ದರು ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಗಾಯಾಳು ಸಾವು: ರಾತ್ರಿ ಹೊತ್ತು ಮೆಹಂದಿ ಹಸನ್ ಮತ್ತು ಅನುಜ್, ನಿತಿನ್ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಇದರ ವಿಕೋಪಕ್ಕೆ ತಿರುಗಿ ಇಬ್ಬರು ಸೇರಿಕೊಂಡು ಚಾಕುವಿನಿಂದ ದಾಳಿ ಮಾಡಿದ್ದಾರೆ. ಅಲ್ಲದೇ, ಇಬ್ಬರೂ ದುಷ್ಕರ್ಮಿಗಳು ನಂತರ ಆತನ ಕಾಲಿಗೆ ಹಗ್ಗ ಕಟ್ಟಿ ತಮ್ಮ ಬೈಕ್ ಮೇಲೆ ಇಡೀ ಪ್ರದೇಶದಲ್ಲಿ ಎಳೆದೊಯ್ದು ಅಮಾನುಷವಾಗಿ ವರ್ತಿಸಿದ್ದಾರೆ. ಇದರ ನಂತರ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ದುಷ್ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿ ಆರಂಭಿಸಿದ್ದರು. ಆದರೆ, ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುವಾಗ ಪೊಲೀಸರ ಮೇಲೆ ಮರು ದಾಳಿಗೆ ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಇಬ್ಬರು ದುಷ್ಕರ್ಮಿಗಳು ಗಾಯಗೊಂಡಿದ್ದು, ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, 2018ರಲ್ಲಿ ಅನುಜ್ ತಂದೆಯ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಈ ಘಟನೆಯ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅನುಜ್ ಹೇಯ ಕೃತ್ಯವನ್ನು ಎಸಗಿದ್ದಾನೆ.