ಬೆಂಗಳೂರು: ಹೈಕಮಾಂಡ್ಗೆ ವರದಿ ಕೊಡಲಿ. ವರದಿ ಕೊಡೋದನ್ನು ಯಾರು ಬೇಡ ಅಂತಾರೆ. ಹೈಕಮಾಂಡ್ಗೆ ವರದಿ ಕೊಡಲು ಇವರಿದ್ದಾರೆ, ಪಡೆಯಲು ಅವರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾಧ್ಯಮ ಪ್ರಕಟಣೆ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಸೂಚ್ಯವಾಗಿ ಉತ್ತರಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಬದಲಾವಣೆ ಯಾವಾಗ ಅಂತ ಗೊತ್ತಿಲ್ಲ. ಲೋಕಸಭೆ ನಂತರ ಬದಲಾವಣೆ ಆಗುತ್ತೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದು ನಾನು ನೋಡಿದೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಡಿಕೆಶಿ ಈಗ ಅಧ್ಯಕ್ಷರಿದ್ದಾರೆ, ಎರಡು ದೊಡ್ಡ ಖಾತೆ ಇದೆ. ಸಹಜವಾಗಿ ಅಧ್ಯಕ್ಷ ಸ್ಥಾನ ಬದಲಾಯಿಸಿ ಅಂತ ಬೇರೆಯವರು ಕೇಳ್ತಾರೆ. ನಾನು ಅಧ್ಯಕ್ಷ ಇದ್ದಾಗಲೂ ಬದಲಾಯಿಸಿ ಅಂತ ಹೇಳಿದ್ರು. ಆಗ ನಾನು ಪಕ್ಷಕ್ಕೆ ಪ್ರಾಮುಖ್ಯತೆ ಕೊಟ್ಟು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಮಂತ್ರಿ ಅಥವಾ ಅಧ್ಯಕ್ಷಗಿರಿ ಪೈಕಿ ಒಂದು ಆಯ್ಕೆ ಮಾಡಿಕೊಳ್ಳಿ ಅಂತ ಆಗ ನನಗೆ ಹೇಳಿದ್ರು, ನಾನು ಅಧ್ಯಕ್ಷ ಸ್ಥಾನ ಆರಿಸಿದ್ದೆ. ಈಗಲೂ ಅದನ್ನೇ ಬಯಸ್ತಿದ್ದಾರೆ. ಅವರಿಗೂ ಒತ್ತಡ ಇರುತ್ತೆ. ಡಿಕೆಶಿಗೆ ಎರಡು ದೊಡ್ಡ ಖಾತೆ ಇದೆ, ಪಕ್ಷ ಸಂಘಟಿಸುವ ದೊಡ್ಡ ಜವಾಬ್ದಾರಿ ಸಹ ಇದೆ. ಹೈಕಮಾಂಡ್ನವರು ಏನು ತೀರ್ಮಾನ ಮಾಡ್ತಾರೋ ನೋಡಬೇಕು ಎಂದು ಹೇಳಿದರು.
ಹೈಕಮಾಂಡ್ ಗಮನಿಸುತ್ತದೆ : ಡಿಕೆಶಿ ಪಕ್ಷ ಸಂಘಟನೆ ಸರಿಯಾಗಿ ಮಾಡ್ತಿಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಹೈಕಮಾಂಡ್ನವರು ಅದನ್ನೆಲ್ಲ ಗಮನಿಸ್ತಿದ್ದಾರಲ್ಲ. ನಾವು ಒಂದು ಸಮುದಾಯ ಸೇರಿ ಸಭೆ ಮಾಡ್ತೀವಿ ಅಂದಿದ್ದನ್ನು ಹೈಕಮಾಂಡ್ ಗಮನಿಸಿದೆ. ಹಾಗೆಯೇ ಪಕ್ಷ ಸಂಘಟನೆ ಆಗ್ತಿದೆಯಾ ಇಲ್ವಾ ಅಂತನೂ ಹೈಕಮಾಂಡ್ನವರು ಗಮನಿಸಿರ್ತಾರೆ. ಆ ಸಂದರ್ಭದಲ್ಲಿ ಅವರು ತೀರ್ಮಾನ ತಗೋತಾರೆ ಎಂದರು.
ಜಾತಿ ಜನಗಣತಿ ವರದಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. ಯಾವ ಕಾರಣಕ್ಕೆ ಅದರ ಚರ್ಚೆ ಇವತ್ತಾಗ್ತಿಲ್ಲ ಅಂತ ಗೊತ್ತಿಲ್ಲ. ಸಂಪುಟ ಸಭೆಗೆ ಹೋದಾಗ ಯಾಕೆ, ಏನು ಅಂತ ಗೊತ್ತಾಗುತ್ತೆ. ಒಕ್ಕಲಿಗರು, ಲಿಂಗಾಯತರನ್ನು ಡಿಗ್ರೇಡ್ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿದೆ. ವರದಿ ಜಾರಿಯಾಗದಂತೆ ಯಾರ ಒತ್ತಡವೂ ಇಲ್ಲ. ಈ ಸಭೆಗಲ್ಲದಿದ್ದರೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಯುತ್ತೆ. ವರದಿ ಬಗ್ಗೆ ಹೆಚ್ಡಿಕೆ ಒಂದು ಮಾತು, ಅಶೋಕ್ ಇನ್ನೊಂದು ಮಾತು ಆಡಿದ್ದಾರೆ. ಅವರಿಗೆ ಏನು ಅನ್ಸಿತ್ತೋ ಮಾತಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.
ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮಕ್ಕಳು, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ನೋಡ್ತಿದ್ರೆ ನಮ್ಮ ಮನಃಸ್ಥಿತಿಗಳು ಬದಲಾಗ್ತಿವೆ ಅಂತ ತೋರಿಸುತ್ತದೆ. ಇದು ಸಮಾಜದ ದೊಡ್ಡ ಸಮಸ್ಯೆ. ಬಹಳ ದೊಡ್ಡ ಪ್ರಮಾಣದಲ್ಲಿ ಕ್ರಮ ಆಗಬೇಕು. ಶಾಲೆ, ಕಾಲೇಜು, ವಿವಿಗಳಲ್ಲಿ ಅರಿವು ಮೂಡಿಸೋದು, ಸುದೀರ್ಘ ಪ್ರಯತ್ನ ಮಾಡಬೇಕಾಗುತ್ತದೆ. ಪೊಲೀಸರಿಂದ ಮಾತ್ರನೇ ನಿಯಂತ್ರಣ ಆಗಲ್ಲ. ಸಮಾಜವೂ ಕೈಜೋಡಿಸಬೇಕು. ಇದು ಸಮಾಜದ ಅತೀ ದೊಡ್ಡ ಸಮಸ್ಯೆ. ಜನ ಬದಲಾಗಬೇಕಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ಊಹಾಪೋಹಗಳನ್ನಾಧರಿಸಿ ಜಾತಿಗಣತಿ ವರದಿ ವಿರೋಧಿಸುವುದು ಅನವಶ್ಯಕ: ಸಿದ್ದರಾಮಯ್ಯ - CM SIDDARAMAIAH