Mobile blast in Himachal Pradesh:ಮೊಬೈಲ್ ಇಂದು ನಮ್ಮ ಜೀವನದ ಒಂದು ಭಾಗವಾಗಿದೆ. ಮಕ್ಕಳಿಂದ ಹಿಡಿದು ಹಿರಿಯವರೆಗೂ ದಿನವೂ ಮೊಬೈಲ್ನಲ್ಲೇ ಕಾಲ ಕಳೆಯುತ್ತಾರೆ. ಆನ್ಲೈನ್ ಪೇಮೆಂಟ್ ನಿಂದ ಹಿಡಿದು ಫೋಟೊಗ್ರಫಿ, ವಿಡಿಯೋಗ್ರಫಿವರೆಗೆ ಎಲ್ಲವನ್ನೂ ಮೊಬೈಲ್ ಮೂಲಕವೇ ಸುಲಭವಾಗಿ ಮಾಡಬಹುದು.
ಇನ್ನು ನಾವು ಯಾವುದಾದರೂ ಕೆಲಸದ ವೇಳೆ ಫೋನ್‌ನ ಬ್ಯಾಟರಿ ಕಡಿಮೆಯಾಯ್ತು ಎಂದರೆ ಸಾಕು ಚಡಪಡಿಕೆ ಅನುಭವಿಸಲು ಪ್ರಾರಂಭಿಸುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಾವು ತಕ್ಷಣ ಫೋನ್ ಚಾರ್ಜ್ಗಿಟ್ಟು ಬಳಸಲು ಪ್ರಾರಂಭಿಸುತ್ತೇವೆ. ಈ ಪ್ರಕ್ರಿಯೆ ನಮ್ಮ ಪ್ರಾಣಕ್ಕೆ ಕುತ್ತು ತರಬಹುದಾಗಿದೆ.
ಹೌದು, ಕೆಲ ದಿನಗಳ ಹಿಂದೆ ಚಂಬಾ ಜಿಲ್ಲೆಯ ಸಲೂನಿ ಉಪವಿಭಾಗದ ಬಿಚುಣಿ ಗ್ರಾಮದ 20 ವರ್ಷದ ಯುವತಿಯೊಬ್ಬಳು ತನ್ನ ಮೊಬೈಲ್ ಚಾರ್ಜ್ ಮಾಡುವಾಗ ಬಳಸುತ್ತಿದ್ದರು. ಇದೇ ವೇಳೆ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಬಾಲಕಿಯ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಆಕೆಗೆ ಮೈಗೆ ಆವರಿಸಿತ್ತು. ಕುಟುಂಬಸ್ಥರು ಹಾಗೋ ಹೀಗೋ ಆ ಬೆಂಕಿಯನ್ನು ನಂದಿಸಿದರು. ಆದರೆ ಅಷ್ಟರಲ್ಲಿ ಯುವತಿ ಗಂಭೀರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದರು.
ಅವಘಡ ನಂತರ ಮನೆಯವರು ಬಾಲಕಿಯನ್ನು ಚಂಬಾ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಅವರ ಸ್ಥಿತಿ ಗಂಭೀರವಾಗಿರುವುದನ್ನು ಕಂಡ ವೈದ್ಯರು ಪ್ರಾಥಮಿಕ ಚಿಕಿತ್ಸೆ ಬಳಿಕ ತಾಂಡಾ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ವಿಶಾಲ್ ಮಹಾಜನ್ ಮಾತನಾಡಿ, 'ಮೊಬೈಲ್ ಸ್ಫೋಟದಿಂದ ಸುಟ್ಟು ಕರಕಲಾದ ಬಾಲಕಿಯನ್ನು ಚಂಬಾ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು. ಚಿಕಿತ್ಸೆ ಬಳಿಕ ಆಕೆಯ ಸ್ಥಿತಿ ಪರಿಗಣಿಸಿ ವೈದ್ಯಕೀಯ ಕಾಲೇಜು ತಾಂಡಾಕ್ಕೆ ರವಾನಿಸಲಾಗಿದೆ' ಎಂದು ತಿಳಿಸಿದ್ದರು.