ನವದೆಹಲಿ:ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಭಾರತ ಪ್ರವಾಸ ಕೈಗೊಂಡಿದ್ದಾರೆ. ಭಾರತ ಪ್ರವಾಸದ ನಿಮಿತ್ತ ಅವರು ಮಂಗಳವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದರು. ಫೆಬ್ರವರಿ 21 - 23 ರಿಂದ ನಡೆಯಲಿರುವ ರೈಸಿನಾ ಡೈಲಾಗ್ 2024ರಲ್ಲಿ ಮುಖ್ಯ ಅತಿಥಿಯಾಗಿ ಹಾಗೂ ಮುಖ್ಯ ಭಾಷಣ ಮಾಡಲಿದ್ದಾರೆ.
ಇದೇ ಮೊದಲ ಬಾರಿಗೆ ದೆಹಲಿಗೆ ಆಗಮಿಸುತ್ತಿರುವ ಪಿಎಂ ಮಿತ್ಸೋಟಾಕಿಸ್ ಅವರಿಗೆ ಆತ್ಮೀಯ ಸ್ವಾಗತ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಗ್ರೀಕ್ ಪ್ರಧಾನಿ, ಹಿರಿಯ ಅಧಿಕಾರಿಗಳು ಮತ್ತು ಉನ್ನತ ವ್ಯಾಪಾರ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮಿತ್ಸೋಟಾಕಿಸ್ ನವದೆಹಲಿಗೆ ಆಗಮಿಸುವ ಮುನ್ನವೇ ಅಲ್ಲಿನ ವಿದೇಶಾಂಗ ಸಚಿವ ಜಿಯೊರ್ಗೊಸ್ ಗೆರಾಪೆಟ್ರಿಟಿಸ್ ಬಂದಿಳಿದಿದ್ದಾರೆ. ಅವರು ಇದೇ ವೇಳೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿ ಭಾರತ-ಗ್ರೀಸ್ ಮತ್ತು ಭಾರತ-ಯುರೋಪ್ ಸಹಕಾರ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು.
ಏತನ್ಮಧ್ಯೆ, ರೈಸಿನಾ ಸಂವಾದದಲ್ಲಿ ಭಾಗವಹಿಸಲು ಅನೇಕ ದೇಶಗಳ ಪ್ರತಿನಿಧಿಗಳು ನವದೆಹಲಿಗೆ ಬಂದಿಳಿದಿದ್ದಾರೆ. ಸ್ವೀಡನ್‌ನ ವಿದೇಶಾಂಗ ಸಚಿವ ಟೋಬಿಯಾಸ್ ಬಿಲ್‌ಸ್ಟ್ರೋಮ್ ಮತ್ತು ಲಾಟ್ವಿಯಾದ ವಿದೇಶಾಂಗ ಸಚಿವ ಕ್ರಿಸ್ಜಾನಿಸ್ ಕರಿನ್ಸ್ ಮಂಗಳವಾರ ಭಾರತಕ್ಕೆ ಭೇಟಿ ನೀಡಿದ್ದಾರೆ. ಭೂತಾನ್ ವಿದೇಶಾಂಗ ಸಚಿವ ಲಿಯಾನ್ಪೊ ಡಿಎನ್ ಧುಂಗ್ಯೆಲ್, ಲಿಥುವೇನಿಯಾ ವಿದೇಶಾಂಗ ಸಚಿವ ಗೇಬ್ರಿಲಿಯಸ್ ಲ್ಯಾಂಡ್ಸ್‌ಬರ್ಗಿಸ್ ಮತ್ತು ಎಸ್ಟೋನಿಯಾದ ವಿದೇಶಾಂಗ ಸಚಿವ ಮಾರ್ಗಸ್ ತ್ಸಾಕ್ನಾ ಕೂಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದಾರೆ. ಸ್ಲೋವಾಕ್ ಗಣರಾಜ್ಯದ ವಿದೇಶಾಂಗ ಸಚಿವ ಜುರಾಜ್ ಬ್ಲಾನರ್ ಮತ್ತು ಡಚ್ ವಿದೇಶಾಂಗ ಸಚಿವ ಹ್ಯಾಂಕೆ ಬ್ರೂನ್ಸ್ಲಾಟ್ ಕೂಡಾ ಆಗಮಿಸಿದ್ದಾರೆ. ಫಿನ್‌ಲ್ಯಾಂಡ್ ವಿದೇಶಾಂಗ ವ್ಯವಹಾರಗಳ ಸಚಿವೆ ಎಲಿನಾ ವಾಲ್ಟೋನೆನ್, ಎರಡು ದಿನಗಳ ಭಾರತ ಭೇಟಿಗಾಗಿ ಬುಧವಾರ ನವದೆಹಲಿಗೆ ಆಗಮಿಸಲಿದ್ದಾರೆ.