ನವದೆಹಲಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧದ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳನ್ನು ಹಿಂದಿರುಗಿಸುವಂತೆ ಕೋರಿ ಅವರ ಕಾನೂನುಬದ್ಧ ವಾರಸುದಾರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ಪ್ರಕರಣದ ವಿಚಾರಣೆ ನಿಂತಿದೆ ಎಂದ ಮಾತ್ರಕ್ಕೆ ಜಯಲಲಿತಾ ಆಪರಾಧದ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದರ್ಥವಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ನ್ಯಾಯಪೀಠವು 2017ರಲ್ಲಿ ಕರ್ನಾಟಕ ರಾಜ್ಯ ವಿ.ಜೆ.ಜಯಲಲಿತಾ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿನ ತನ್ನ ಅಭಿಪ್ರಾಯಗಳನ್ನು ಉಲ್ಲೇಖಿಸಿತು. ಆಗ ಮೇಲ್ಮನವಿ ಬಾಕಿ ಇರುವಾಗಲೇ ಜಯಲಲಿತಾ ನಿಧನರಾದ ಕಾರಣದಿಂದ ವಿಚಾರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
"ಆರೋಪಿ ನಂ.1 (ಜಯಲಲಿತಾ) ಅವರನ್ನು ಖುಲಾಸೆಗೊಳಿಸಿದ ಹೈಕೋರ್ಟ್ ತೀರ್ಪಿನ ನಿಖರತೆಗೆ ಸಂಬಂಧಿಸಿದಂತೆ ಹೆಚ್ಚಿನ ಪರಿಗಣನೆಯನ್ನು ಈ ನ್ಯಾಯಾಲಯವು ಮುಂದೆ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಆದಾಗ್ಯೂ, ಹೈಕೋರ್ಟ್ನ ತೀರ್ಪು ಅಂತಿಮ ಹಂತವನ್ನು ತಲುಪಿದೆ ಎಂದು ಇದರ ಅರ್ಥವಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಕ್ರಮ ಆಸ್ತಿ ಗಳಿಕೆ (ಡಿಎ) ಪ್ರಕರಣದಲ್ಲಿ ಜಯಲಲಿತಾ ಅವರಿಗೆ ಸೇರಿದ ಮುಟ್ಟುಗೋಲು ಹಾಕಿಕೊಂಡ ಆಸ್ತಿಯ ಮೇಲೆ ಹಕ್ಕು ಕೋರಿ ಅವರ ಸೋದರ ಸೊಸೆ ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೇಲಿನಂತೆ ತೀರ್ಪು ನೀಡಿದೆ.
ಜನವರಿ 29ರಂದು ಸಿಬಿಐ ವಿಶೇಷ ನ್ಯಾಯಾಲಯ ಜಯಲಲಿತಾ ಅವರಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸುವಂತೆ ಆದೇಶಿಸಿತ್ತು. ಜಯಲಲಿತಾ ಅವರ ಸೋದರ ಸೊಸೆ ಮತ್ತು ಸೋದರಳಿಯ ಜೆ.ದೀಪಾ ಮತ್ತು ಜೆ.ದೀಪಕ್ ಅವರು ತಮ್ಮನ್ನು ಕಾನೂನುಬದ್ಧ ವಾರಸುದಾರರಾಗಿ ಪರಿಗಣಿಸಿ ಆಸ್ತಿಗಳ ಮೇಲೆ ಹಕ್ಕು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಜನವರಿ 13 ರಂದು ವಜಾಗೊಳಿಸಿದ ನಂತರ ಈ ಆದೇಶ ಬಂದಿದೆ.
ಡಿಎ ಪ್ರಕರಣದಲ್ಲಿ ಜಯಲಲಿತಾ ದೋಷಿ ಎಂದು ಸಾಬೀತಾಗಿತ್ತು. ತಿಳಿದಿರುವ ಆದಾಯದ ಮೂಲಗಳನ್ನು ಮೀರಿ ಅವರು ಆಸ್ತಿ ಸಂಪಾದಿಸಿದ್ದಾರೆ ಎಂದು ಸಾಬೀತಾಗಿತ್ತು. 2016 ರಲ್ಲಿ ಅವರ ನಿಧನದ ನಂತರ ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದರೂ ಉನ್ನತ ನ್ಯಾಯಾಲಯವು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮವನ್ನು ಎತ್ತಿಹಿಡಿದಿದೆ.
ಪ್ರಸ್ತುತ, ಜಯಲಲಿತಾ ವಿರುದ್ಧದ ಪ್ರಕರಣ ರದ್ದಾಗಿರುವುದರಿಂದ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಅವರ ವಾರಸುದಾರರು ವಾದಿಸಿದ್ದರು. ಆದಾಗ್ಯೂ, ಇತರ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಆಸ್ತಿ ಮುಟ್ಟುಗೋಲು ಸೂಕ್ತವಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿತು.
ವೇದ ನಿಲಯಂ, ಚೆನ್ನೈನ ಪೋಯೆಸ್ ಗಾರ್ಡನ್ನಲ್ಲಿರುವ ಜಯಲಲಿತಾ ಅವರ ನಿವಾಸ, ಡಿಎ ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ಭೂಮಿಗಳು ಮತ್ತು ಎಸ್ಟೇಟ್ಗಳು, ಅವರ ಹೆಸರಿನಲ್ಲಿರುವ ಬ್ಯಾಂಕ್ ಠೇವಣಿಗಳು ಮತ್ತು ಇತರ ಹಣಕಾಸು ಸ್ವತ್ತುಗಳು, ಚಿನ್ನದ ಆಭರಣಗಳು ಮತ್ತು ಜುಲೈ 1, 1991 ರಿಂದ ಏಪ್ರಿಲ್ 30, 1996 ರವರೆಗಿನ ಅವಧಿಯಲ್ಲಿ ಅವರು ಸಂಗ್ರಹಿಸಿದ ಬೆಲೆಬಾಳುವ ವಸ್ತುಗಳು ತಮಿಳುನಾಡು ಸರ್ಕಾರದ ಬಳಿ ಇವೆ.
ಇದನ್ನೂ ಓದಿ: ಜಯಲಲಿತಾ ಚಿನ್ನಾಭರಣ ಒಯ್ಯಲು 6 ದೊಡ್ಡ ಪೆಟ್ಟಿಗೆ ತನ್ನಿ: ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ನಿರ್ದೇಶನ