ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಸರಾಸರಿ ಶೇ. 26ರಷ್ಟು ಹೆಚ್ಚಳವಾಗಿದ್ದು, ದೇಶದ ಪ್ರಮುಖ ಏಳು ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ಅನರಾಕ್ ತಿಳಿಸಿದೆ.
ಅನರಾಕ್ ಎಂಬ ರಿಯಲ್ ಎಸ್ಟೇಟ್ ಸಲಹೆಗಾರ ಕಂಪೆನಿ ನಡೆಸಿದ ಸರ್ವೇಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕಚೇರಿ ಸ್ಥಳಗಳಿಗೆ ಅತೀ ಹೆಚ್ಚು ಬಾಡಿಗೆ ಪಡೆಯುವ ನಗರಗಳಲ್ಲಿ ಬೆಂಗಳೂರು ಒಂದನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ದೇಶದ ಏಳು ಪ್ರಮುಖ ನಗರಗಳಲ್ಲಿ ಕಚೇರಿ ಬಾಡಿಗೆ ಸರಾಸರಿ 26 ಶೇ. ಹೆಚ್ಚಾಗಿದೆ. ಕಚೇರಿ ಸ್ಥಳಗಳಿಗೆ ಹೆಚ್ಚು ಬೇಡಿಕೆ ಇರುವ ಪ್ರದೇಶಗಳಿಗೆ ಪ್ರತಿ ಚದರ ಅಡಿಗೆ ತಿಂಗಳಿಗೆ 93 ರೂ. ಇದೆ ಎಂದು ವರದಿ ಹೇಳಿದೆ.
ಅನರಾಕ್ ಶುಕ್ರವಾರ ಭಾರತದ ಏಳು ಪ್ರಮುಖ ನಗರಗಳಾದ ದೆಹಲಿ- ಎನ್ಸಿಆರ್, ಮುಂಬೈ, ಕಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಈ ಏಳು ನಗರಗಳಲ್ಲಿ ಬೆಂಗಳೂರು 2019ರಲ್ಲಿ ತಿಂಗಳಿಗೆ ಪ್ರತಿ ಚದರ ಅಡಿಗೆ ಇದ್ದ 74 ರೂಪಾಯಿಯಿಂದ 2024ರಲ್ಲಿ ತಿಂಗಳಿಗೆ ಪ್ರತಿ ಚದರ ಅಡಿಗೆ 93 ರೂಪಾಯಿವರೆಗೆ, ಸರಾಸರಿ ಶೇ. 26 ರಷ್ಟು ಕಚೇರಿ ಬಾಡಿಗೆ ಏರಿಕೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹೈದರಾಬಾದ್, ಚೆನ್ನೈ, ದೆಹಲಿ- ಎನ್ಸಿಆರ್, ಪುಣೆ, ಮುಂಬೈ ಹಾಗೂ ಕಲ್ಕತ್ತಾ ನಿಂತಿದೆ.
ಹೈದರಾಬಾದ್ನಲ್ಲಿ 2019ರಲ್ಲಿ ಪ್ರತಿ ಚದರ ಅಡಿಗೆ ಇದ್ದ 56 ರೂ. ಮಾಸಿಕ ಕಚೇರಿ ಬಾಡಿಗೆ 2024ರಲ್ಲಿ 67 ರೂ. ಗೆ ಹೆಚ್ಚಳವಾಗಿದೆ. ಈ ಮೂಲಕ ಶೇ. 25 ರಷ್ಟು ಏರಿಕೆಯಾಗಿದೆ. ಚೆನ್ನೈನಲ್ಲಿ 2019ರಲ್ಲಿ ಪ್ರತಿ ಚದರ ಅಡಿಗೆ ಮಾಸಿಕವಾಗಿ 60 ರೂ. ಇತ್ತು. ಅದು 75 ರೂ.ಗೆ ಏರಿಕೆ ಕಂಡಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಮಾಸಿಕ ಕಚೇರಿ ಬಾಡಿಗೆ ಶೇ.10 ರಷ್ಟು ಏರಿಕೆಯಾಗಿ, 2019 ರಲ್ಲಿದ್ದ ರೂ. 78 ರಿಂದ 2024 ರಲ್ಲಿ ರೂ. 86 ಕ್ಕೆ ತಲುಪಿದೆ. ಪುಣೆಯಲ್ಲಿ ಶೇ.19 ರಷ್ಟು ಏರಿಕೆಯಾಗಿ, 2019 ರಲ್ಲಿ ಪ್ರತಿ ಚದರ ಅಡಿಗೆ ಇದ್ದ 68 ರೂ. 2024 ರಲ್ಲಿ ಪ್ರತಿ ಚದರ ಅಡಿಗೆ ರೂ. 81ಕ್ಕೆ ತಲುಪಿದೆ.
ಮುಂಬೈ ಮಹಾನಗರ ಪ್ರದೇಶ (ಎಂಎಂಆರ್) ದಲ್ಲಿ 2019 ರಲ್ಲಿ ಪ್ರತಿ ಚದರ ಅಡಿಗೆ ರೂ. 124 ರಿಂದ 2024 ರಲ್ಲಿ ಪ್ರತಿ ಚದರ ಅಡಿಗೆ ರೂ.140ಕ್ಕೆ ಹೆಚ್ಚಳ ಆಗಿದೆ. ಕಲ್ಕತ್ತಾದಲ್ಲಿ 2019 ರಲ್ಲಿದ್ದ ಸರಾಸರಿ ಕಚೇರಿ ಬಾಡಿಗೆ 52 ರೂ., 62 ರೂ.ಗೆ ಏರಿಕೆ ಕಂಡಿದೆ.
ದಕ್ಷಿಣದ ನಗರಗಳಾದ ಬೆಂಗಳೂರು, ಹೈದರಾಬಾದ್, ಚೆನ್ನೈ ಕಚೇರಿ ಸ್ಥಳಗಳನ್ನು ಬಾಚಿಕೊಳ್ಳುವಲ್ಲಿ ಸಿಂಹಪಾಲು ಪಡೆದಿವೆ ಎಂದು ಅನಾರಾಕ್‌ನ ವಾಣಿಜ್ಯ ಗುತ್ತಿಗೆ ಮತ್ತು ಸಲಹಾ ವ್ಯವಸ್ಥಾಪಕಿ ಪ್ಯೂಷ್ ಜೈನ್ ಹೇಳಿದರು.
ಇದನ್ನೂ ಓದಿ: ಏಷ್ಯಾ-ಪೆಸಿಫಿಕ್‌ನ 100 ಬೆಸ್ಟ್ ಸಿಟಿಗಳ ಪಟ್ಟಿ: ಬೆಂಗಳೂರು, ಮೈಸೂರಿಗೆ ಎಷ್ಟನೇ ಸ್ಥಾನ?