ಸಮಸ್ತಿಪುರ (ಬಿಹಾರ):ಮಗನ ಸಾವಿಗೆ ನ್ಯಾಯ ಸಿಗುವವರೆಗೂ ಆತನ ಚಿತಾಭಸ್ಮವನ್ನು ವಿಸರ್ಜನೆ ಮಾಡುವುದಿಲ್ಲ ಎಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಅವರ ತಂದೆ ಹೇಳಿದ್ದಾರೆ. ತನ್ನ ಮಗನಿಗೆ ಕಿರುಕುಳ ನೀಡಿ ಆತನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಅವರು ರವಿವಾರ ಒತ್ತಾಯಿಸಿದ್ದಾರೆ.
ಸುಭಾಷ್ (34) ಡಿಸೆಂಬರ್ 9 ರಂದು ಬೆಂಗಳೂರಿನ ಮುನ್ನೆಕೊಳಲುನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತನ್ನ ಹೆಂಡತಿ ಮತ್ತು ಅತ್ತೆ ಮಾವಂದಿರು ತನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ನಿರಂತರ ಚಿತ್ರಹಿಂಸೆ ನೀಡಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸುದೀರ್ಘ ವೀಡಿಯೊ ಮಾಡಿ ಹಾಗೂ ಡೆತ್ ನೋಟ್ ಬರೆದಿಟ್ಟು ಸುಭಾಷ್ ಸಾವಿಗೆ ಶರಣಾಗಿದ್ದರು.
"ಅವರನ್ನು (ಸುಭಾಷ್ ಅವರ ವಿಚ್ಛೇದಿತ ಪತ್ನಿ ಮತ್ತು ಅತ್ತೆ) ಬಂಧಿಸಿದ್ದಕ್ಕಾಗಿ ನಾನು ಕರ್ನಾಟಕ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಮಗನಿಗೆ ಕಿರುಕುಳ ನೀಡಿದ ಎಲ್ಲರಿಗೂ ಶಿಕ್ಷೆಯಾಗಬೇಕು. ಇದರಿಂದ ಅವನಿಗೆ ನ್ಯಾಯ ಸಿಗುತ್ತದೆ ಮತ್ತು ಅವನ ಆತ್ಮಕ್ಕೆ ಶಾಂತಿ ಸಿಗುತ್ತದೆ. ನಮಗೆ ನ್ಯಾಯ ಸಿಗುವವರೆಗೂ ನಾನು ನನ್ನ ಮಗನ ಚಿತಾಭಸ್ಮವನ್ನು ವಿಸರ್ಜಿಸುವುದಿಲ್ಲ" ಎಂದು ಸುಭಾಷ್ ತಂದೆ ಪವನ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
"ನನ್ನ ಮಗನಿಗೆ ಹಣಕ್ಕಾಗಿ ಕಿರುಕುಳ ಮತ್ತು ಚಿತ್ರಹಿಂಸೆ ನೀಡಲಾಗುತ್ತಿತ್ತು ಮತ್ತು ಆತನ ಹೆಂಡತಿ ಆತನನ್ನು ಅವಮಾನಿಸುತ್ತಿದ್ದಳು... ದಯವಿಟ್ಟು ನಮಗೆ ನ್ಯಾಯ ಒದಗಿಸಿ ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಬಂಧಪಟ್ಟ ಎಲ್ಲರನ್ನೂ ವಿನಂತಿಸುತ್ತೇನೆ..." ಎಂದು ಅವರು ಹೇಳಿದರು.
ಮೊಮ್ಮಗನ ಕಸ್ಟಡಿ ನಮಗೆ ನೀಡಿ: ತನ್ನ ನಾಲ್ಕು ವರ್ಷದ ಮೊಮ್ಮಗನನ್ನು ತನ್ನ ಕಸ್ಟಡಿಗೆ ನೀಡಬೇಕೆಂದು ಪವನ್ ಕುಮಾರ್ ಇದೇ ಸಂದರ್ಭದಲ್ಲಿ ಕೋರಿದರು. "ನನ್ನ ಮಗ ಆಂತರಿಕವಾಗಿ ಕುಗ್ಗಿ ಹೋಗಿದ್ದ... ಹೆಂಡತಿ ಮತ್ತು ಅತ್ತೆ ಮಾವಂದಿರು ಚಿತ್ರಹಿಂಸೆ ನೀಡಿದರೂ ಅದರ ಬಗ್ಗೆ ಆತ ಯಾರಿಗೂ ಹೇಳಲಿಲ್ಲ. ತನ್ನ ಹೆತ್ತವರಿಗೆ ತನ್ನ ಮಗುವನ್ನು ಸುಪರ್ದಿಗೆ ನೀಡಬೇಕು ಎಂದು ಅವನ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ" ಎಂದು ಕುಮಾರ್ ಹೇಳಿದರು. ಸುಭಾಷ್ ಅವರು ತಮ್ಮ ಮಗನಿಗಾಗಿ ತಿಂಗಳಿಗೆ 40,000 ರೂ.ಗಳ ಪೋಷಣಾ ಭತ್ಯೆ ನೀಡಬೇಕೆಂದು ಕೋರಲಾಗಿತ್ತು ಎಂದು ಅವರು ಹೇಳಿದರು.
ಸುಳ್ಳು ಪ್ರಕರಣ ಹಿಂಪಡೆಯಲಿ: ಸಮಸ್ತಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಭಾಷ್ ಅವರ ಸಹೋದರ ಬಿಕಾಸ್ ಕುಮಾರ್, ತಮ್ಮ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.