ತಿರುವನಂತಪುರ: ಕಳೆದ ವಾರ ಏಕಾಏಕಿ ಏರ್ ಇಂಡಿಯಾ ಏಕ್ಸ್ಪ್ರೆಸ್ ವಿಮಾನ ರದ್ದಾದ ಪರಿಣಾಮ ಹಲವು ಪ್ರಮುಖ ಮಾರ್ಗದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿ, ಜನರು ಸಮಸ್ಯೆಗೆ ಸಿಲುಕಿದ್ದು ಸುಳ್ಳಲ್ಲ. ಈ ಬಗ್ಗೆ ಡಿಜಿಸಿಎ ಕೂಡ ವರದಿಯನ್ನು ಕೇಳಿತ್ತು. ಈ ಪ್ರತಿಭಟನೆಯಿಂದ ಅನೇಕ ಮಂದಿ ತಮ್ಮ ಅಗತ್ಯ ಮೀಟಿಂಗ್, ಪ್ರವಾಸ, ಕುಟುಂಬವನ್ನು ಸರಿಯಾದ ಸಮಯದಲ್ಲಿ ಸೇರದಂತೆ ಮಾಡಿತು. ಆದರೆ, ಇದರಲ್ಲಿ ನಡೆದ ಮತ್ತೊಂದು ಹೃದಯ ವಿದ್ರಾವಕ ಘಟನೆ ಎಂದರೆ, ಕೇರಳದಲ್ಲಿದ್ದ ಮಹಿಳೆಯೊಬ್ಬರು ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ತನ್ನ ಪತಿಯನ್ನು ಕೊನೆಯಾದಾಗಿ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದೀಗ ಪತಿ ಇಹಲೋಹ ತ್ಯಜಿಸಿದ್ದು, ಬಾಳ ಸಂಗಾತಿಯನ್ನು ಅಂತಿಮ ಕ್ಷಣದಲ್ಲಿ ನೋಡಲು ಆಗಲಿಲ್ಲ ಎಂಬ ಕೊರಗು ಮಹಿಳೆಯನ್ನು ಕಾಡುತ್ತಿದೆ. ಇದಕ್ಕೆ ಕಾರಣವಾದ ಏರ್ ಇಂಡಿಯಾ ವಿರುದ್ಧ ಇದೀಗ ಮಹಿಳೆ ಕುಟುಂಬಸ್ಥರು ದಾವೆ ಹೂಡಲು ಸಜ್ಜಾಗಿದ್ದಾರೆ.
ಏನಿದು ಘಟನೆ: ಕೇರಳದ ತಿರುವನಂತಪುರದ ಅಮೃತ ಎಂಬುವರ ಪತಿ ಒಮನ್ನಲ್ಲಿ ಐಸಿಯುಗೆ ದಾಖಲಾಗಿದ್ದರು. ವಿಷಯ ತಿಳಿದಾಕ್ಷಣ ಅಮೃತ ಮೇ 8ರಂದು ಏರ್ ಇಂಡಿಯಾ ಮೂಲಕ ಮಸ್ಕತ್ಗೆ ಟಿಕೆಟ್ ಬುಕ್ ಮಾಡಿ ವಿಮಾನ ನಿಲ್ದಾಣ ತಲುಪಿದರು. ಆದರೆ, ಅಲ್ಲಿ ವಿಮಾನ ಹಾರಾಟ ರದ್ದಾಗಿತ್ತು. ದಿಕ್ಕು ತೋಚದೆ ಮುಂದಿನ ದಿನದ ಟಿಕೆಟ್ ಅನ್ನು ಪಡೆದರು. ಆದರೆ, ದುರದೃಷ್ಟವಶಾತ್ ಆ ದಿನದ ವಿಮಾನ ಹಾರಾಟ ಕೂಡ ರದ್ದಾಯಿತು. ಈ ನಡುವೆ ಅವರ ಪತಿ ಕೂಡ ಸೋಮವಾರ ಒಮನ್ನಲ್ಲಿ ಸಾವನ್ನಪ್ಪಿದ ಸುದ್ದಿ ತಲುಪಿತು.
ಗಂಡನ ಸ್ಥಿತಿ ಕುರಿತು ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಮನವರಿಕೆ ಪ್ರಯತ್ನ ಕೂಡ ನಡೆಸಿ, ಏನಾದರೂ ಮಾಡುವಂತೆ ಮನವಿ ಮಾಡಲಾಯಿತು. ಆದರೆ, ಅವರಿಂದ ಏನು ಮಾಡಲು ಸಾಧ್ಯವಾಗಲೇ ಇಲ್ಲ ಎಂದು ಅಮೃತಾ ತಾಯಿ ತಿಳಿಸಿದ್ದಾರೆ.