ಉನ್ನಾವೊ (ಉತ್ತರ ಪ್ರದೇಶ) : ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ. ಉನ್ನಾವೋ ಜಿಲ್ಲೆಯ ಬಿಘಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಟಾನ್ ಗ್ರಾಮದ ನಿವಾಸಿಯಾದ ಸುನೀತಾ ಎಂಬುವರು ಮಗುವಿಗೆ ಜನ್ಮ ನೀಡಿದ್ದಾರೆ.
ಕಾಂಚನ್ ನಗರದಲ್ಲಿರುವ ಮಹರ್ಷಿ ದಯಾನಂದ ಸರಸ್ವತಿ ಮಿಷನ್ ಇಂಟರ್ ಕಾಲೇಜಿನಲ್ಲಿ 9 ತಿಂಗಳ ತುಂಬು ಗರ್ಭಿಣಿಯಾಗಿದ್ದ ಸುನೀತಾ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಶುರುವಾಗಿದ್ದು, ಕೊಠಡಿ ನಿರೀಕ್ಷಕರಿಗೆ ತಿಳಿಸಿದ್ದಾರೆ. ತಕ್ಷಣ ಅವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಇಲ್ಲದ ಕಾರಣ ಪುರುಷ ಸಿಬ್ಬಂದಿಯೇ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆ ನಂತರ ಕೊಠಡಿ ನಿರೀಕ್ಷಕರು ಮಹಿಳೆಯ ಬಗ್ಗೆ ಕೇಂದ್ರದ ಆಡಳಿತಾಧಿಕಾರಿ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.