ಕುದುರೆಯು ಶಕ್ತಿಗೆ ಸಮಾನಾರ್ಥಕವೆಂದರೆ ತಪ್ಪಗಲಾರದು. ಎಂಜಿನ್ ಸಾಮರ್ಥ್ಯವನ್ನು ಕುದುರೆ ಶಕ್ತಿಯಲ್ಲಿ ಅಳೆಯಲಾಗುತ್ತದೆ. ಒಂದು ಕುದುರೆ ಶಕ್ತಿ 746 ವ್ಯಾಟ್‌ಗಳಿಗೆ ಸಮಾನವಾಗಿರುತ್ತದೆ. ಕುದುರೆ ಶಕ್ತಿ (Horse Power) ಎಂಬ ಪದವನ್ನು ಸ್ಕಾಟಿಷ್ ಎಂಜಿನಿಯರ್ ಜೇಮ್ಸ್ ವ್ಯಾಟ್ ಎಂಬುವವರು ಬಳಕೆಗೆ ತಂದರು. ಅವರು ಉಗಿ ಯಂತ್ರಗಳ ಶಕ್ತಿಯನ್ನು ಕುದುರೆಗಳ ಶಕ್ತಿಗೆ ಹೋಲಿಸಲು ಈ ಪದವನ್ನು ಬಳಸಿದರು.
ಕುದುರೆಗಳು ಏಕೆ ಕುಳಿತು ನಿದ್ರಿಸುವುದಿಲ್ಲ: ಕಾಡು ಅಥವಾ ಸಾಕು ಪ್ರಾಣಿಗಳೆಲ್ಲವೂ ಸ್ವಾಭಾವಿಕವಾಗಿ ಕಾಲುಗಳನ್ನು ಮಡಚಿ ನಿದ್ರಿಸುವ ಪ್ರವೃತ್ತಿಯನ್ನು ಹೊಂದಿರುತ್ತವೆ. ಆನೆಗಳು ಮತ್ತು ಒಂಟೆಗಳು ಸಹ ನೆಲದ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತವೆ. ಆದರೆ, ಕುದುರೆಗಳು ಮತ್ತು ಜಿರಾಫೆಗಳು ಮಾತ್ರ ನಿಂತು ನಿದ್ರಿಸುತ್ತವೆ. ಜಿರಾಫೆಗಳ ದೇಹವು ಅತಿಯಾಗಿ ಉದ್ದವಿರುವುದರಿಂದ ಅವುಗಳು ಕೆಳಗೆ ಮಲಗಿದರೆ ಅವುಗಳ ಮೇಲೆ ಇತರ ಪ್ರಾಣಿಗಳಿಂದ ದಾಳಿಯಾದಾಗ ಎದ್ದೇಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆಕ್ರಮಣದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಿಂತುಕೊಂಡೇ ನಿದ್ರಿಸುತ್ತವೆ. ಇದರ ಹಾಗೇಯೇ ಕುದುರೆಗಳು ಸಹ ನಿಂತುಕೊಂಡೇ ನಿದ್ದೆಗೆ ಜಾರುತ್ತವೆ. ಕುದುರೆಯ ಬೆನ್ನು ನೇರವಾಗಿ ಇರುವುದರಿಂದ ಅವುಗಳಿಗೂ ಕೆಳಗೆ ಮಲಗಿದರೆ ರಪ್ಪನೇ ಮೇಲೆಳಲು ಅಸಾಧ್ಯ. ಇದಕ್ಕಾಗಿ ನಿಂತಲ್ಲೆ ನಿದ್ರೆ ಮಾಡುತ್ತವೆ.
ಮೂರು ಕಾಲುಗಳ ಮೇಲೆ ವಿಶ್ರಾಂತಿ: ಕುದುರೆಗಳು ಎಷ್ಟೇ ವೇಗವಾಗಿ ಓಡಿದರೂ ಅವು ದಣಿಯದಿರಲು ಅವುಗಳ ಬಲವಾದ ಸ್ನಾಯುಗಳೇ ಕಾರಣ. ನೀವು ಯಾವತ್ತಾದರೂ ನಿಂತಿರುವ ಕುದುರೆಯನ್ನು ನೋಡಿದರೆ ಅದು ವಿಶ್ರಾಂತಿಗೆ ಮೂರು ಕಾಲುಗಳನ್ನು ಮಾತ್ರ ಬಳಸುತ್ತದೆ. ಇನ್ನೊಂದು ಕಾಲಿಗೆ ವಿಶ್ರಾಂತಿ ನೀಡುತ್ತದೆ. ಹೀಗೆ ಒಂದರ ನಂತರ ಒಂದರಂತೆ ತನ್ನ ನಾಲ್ಕು ಕಾಲುಗಳಿಗೆ ವಿಶ್ರಾಂತಿ ನೀಡುತ್ತದೆ. ಕೇವಲ ಕುದುರೆಗಳು ಅನಾರೋಗ್ಯಕ್ಕೆ ಒಳಗಾದಾಗ ಮಾತ್ರ ಮಲಗುತ್ತದೆ.
ಜಲಚರಗಳೂ ಕೂಡಾ ಹೀಗೆ!: ನೀರಿನಲ್ಲಿರುವ ಅತ್ಯಂತ ಬುದ್ಧಿವಂತ ಡಾಲ್ಫಿನ್‌ಗಳು ಸಹ ನಿರಂತರವಾಗಿ ಚಲಿಸುತ್ತಿರಬೇಕು. ಅವು ನಿದ್ರಿಸುವಾಗ ಅವುಗಳ ಮೆದುಳಿನ ಒಂದು ಭಾಗ ಮಾತ್ರ ಕೆಲಸ ಮಾಡುತ್ತದೆ, ಒಂದು ಭಾಗ ವಿಶ್ರಾಂತಿ ಪಡೆಯುತ್ತದೆ. ಆದ್ದರಿಂದ ಚಲನೆಯ ಜೊತೆಗೆ ಅವು ಉಸಿರಾಡುತ್ತ ನಿದ್ರೆ ಮಾಡುತ್ತವೆ. ಶಾರ್ಕ್‌ಗಳೂ ಕೂಡ ಇದರಂತೆಯೇ ಮಾಡುತ್ತವೆ ಎಂಬುದು ನೆನಪಿರಲಿ.
ಪಕ್ಷಿಗಳ ನಿದ್ದೆ ಹೇಗೆ: ಅನೇಕ ಪಕ್ಷಿಗಳು ಮರದ ಕೊಂಬೆಗಳ ಮೇಲೆ ನಿಂತು ಮಲಗುತ್ತವೆ. ಕೆಲವೇ ಕೆಲವು ಮಾತ್ರ ಗೂಡುಗಳನ್ನು ನಿರ್ಮಿಸಿ ಮಲಗುತ್ತವೆ. ಮರಗಳ ಮೇಲೆ ಮಲಗುವ ಪಕ್ಷಿಗಳು ಇತರ ಪಕ್ಷಿಗಳು ಮತ್ತು ಪ್ರಾಣಿಗಳ ದಾಳಿಯಿಂದ ಬೇಗನೆ ತಪ್ಪಿಸಿಕೊಳ್ಳಲು ನಿಂತುಕೊಂಡೇ ಮಲಗುತ್ತವೆ. ಕೆಲವೊಂದು ಪಕ್ಷಿಗಳು ಒಂಟಿ ಕಾಲ ಮೇಲೆ ಮಲಗುತ್ತವೆ. ಪಕ್ಷಿಗಳು ತಮ್ಮ ತಲೆಯನ್ನು ರೆಕ್ಕೆಯ ಒಳಗೆ ಇಟ್ಟು ನಿದ್ರೆಗೆ ಜಾರುವುದು ವಿಶೇಷ.
ಇದನ್ನೂ ಓದಿ: ಶ್ವಾನಗಳು ನಿಜವಾಗಿಯೂ ಹಾಗೇಕೆ ಮಾಡುತ್ತವೆ?; ರಾತ್ರಿ ಅವು ಊಳಿಡುವುದಕ್ಕೆ ವಿಜ್ಞಾನ ಬಿಚ್ಚಿಟ್ಟಿದೆ ಕಾರಣ!