ಮುಂಬೈ, ಮಹಾರಾಷ್ಟ್ರ: 100 ವರ್ಷಗಳ ಹಿಂದೆ ಇದೇ ದಿನ ಮುಂಬೈನಲ್ಲಿ ರೈಲ್ವೆ ಮಾರ್ಗದ ವಿದ್ಯುದೀಕರಣ ಮಾಡಲಾಗಿತ್ತು. ಈ ಮೂಲಕ ಹೊಸ ಪರಿವರ್ತನೆ ಪ್ರಯಾಣಕ್ಕೆ ಭಾರತೀಯ ರೈಲ್ವೆ ಮುನ್ನುಡಿ ಬರೆದಿತ್ತು. ಇದೀಗ ಈ ಪ್ರಯಾಣಕ್ಕೆ ಶತಮಾನೋತ್ಸವ ಸಂಭ್ರಮ. 1925ರ ಫೆಬ್ರವರಿ 3 ರಂದು ಮುಂಬೈ ಮತ್ತು ಭಾರತೀಯ ರೈಲ್ವೆ ಇತಿಹಾಸವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ.
ಕಾರಣ ಇಲ್ಲಿ ಈ ದಿನ ವಿಕ್ಟೋರಿಯಾ ಟರ್ಮಿನಸ್‌ನಿಂದ, (ಈಗ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್) ಮುಂಬೈನ ಕುರ್ಲಾ ಮಾರ್ಗದಲ್ಲಿ ಮೊದಲ ಎಲೆಕ್ಟ್ರಿಕ್ ರೈಲು ಸಂಚರಿಸುವ ಮೂಲಕ ಭಾರತೀಯ ರೈಲ್ವೆಯ ವಿದ್ಯುದ್ದೀಕರಣದ ಶಕೆ ಆರಂಭವಾಯಿತು.
ಇಂದು 3 ಫೆಬ್ರವರಿ 2025, ಈ ಐತಿಹಾಸಿಕ ಘಟನೆಗೆ ನೂರರ ಸಂಭ್ರಮ. ನೂರು ವರ್ಷಗಳ ಈ ಸುಧೀರ್ಘ ಪ್ರಯಾಣದಲ್ಲಿ ರೈಲು ಸಾರಿಗೆ ಪರಿಸರ ಸ್ನೇಹ ಪರತೆ ದಿಕ್ಕಿನೆಡೆಗೆ ಸಾಗಿದೆ. ಮುಂಬೈನಲ್ಲಿನ ಈ ಐತಿಹಾಸಿಕ ಪರಿವರ್ತನೆಯು ದೇಶಕ್ಕೆ ಆಧುನಿಕತೆಯ ಅಲೆಯನ್ನು ತಂದಿತು. 1925ರಲ್ಲಿ ಮುಂಬೈ ಕೈಗಾರಿಕೆಯತ್ತ ಸಾಗಿತ್ತು. ಈ ವೇಳೆ, ಜನಸಂಖ್ಯೆ ಬೆಳೆವಣಿಗೆ ಆದಂತೆ ಸಾಂಪ್ರದಾಯಿಕ ಉಗಿ ಇಂಜಿನ್ ಮಾಲಿನ್ಯ ಹೆಚ್ಚಳ ಮತ್ತು ನಿಧಾನ ಸಂಚಾರವನ್ನು ಹೊಂದಿತು. ಬೆಳೆಯುತ್ತಿರುವ ಈ ಜನಸಂಖ್ಯೆ ನಿರ್ವಹಣೆಗೆ ಮತ್ತು ಪ್ರಯಾಣದ ಒತ್ತಡ ನಗರದ ಮೇಲೆ ಬಿದ್ದಿತ್ತು. ಆಗ ಬ್ರಿಟಿಷರ ಕಾಲದ ಗ್ರೇಟ್ ಇಂಡಿಯನ್ ಪೆನಿನ್ಸುಲಾ ರೈಲ್ವೆ ಕಂಪನಿಯು ಮುಂಬೈ ಉಪನಗರ ರೈಲ್ವೆಯನ್ನು ವಿದ್ಯುದ್ದೀಕರಿಸಲು ನಿರ್ಣಾಯಕ ನಿರ್ಧಾರ ಕೈಗೊಂಡಿತ್ತು.
ಹೊಸ ಮೈಲಿಗಲ್ಲು ನೆಟ್ಟ ದಿನ: 1925ರಲ್ಲಿ ಆರಂಭವಾದ ಭಾರತೀಯ ರೈಲ್ವೆಯ ವಿದ್ಯುದೀಕರಣದ ಪಯಣ ಇಂದು 100 ವರ್ಷಗಳನ್ನು ಪೂರೈಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಐತಿಹಾಸಿಕ ಪ್ರಯಾಣವೂ ಭಾರತೀಯ ರೈಲ್ವೆಯು ಕೇವಲ ಪ್ರಯಾಣದ ಸಾಧನವಾಗಿ ಮಾತ್ರವಲ್ಲದೇ ದೇಶದ ಅಭಿವೃದ್ಧಿಯ ಬಲವಾದ ಬೆನ್ನೆಲುಬಾಗಿದೆ. ಇದು ದಕ್ಷ ಮತ್ತು ವೇಗದ ಸಾರಿಗೆಯ ಸಂಕೇತವಾಗಿದೆ.
ಭಾರತದ ಮೊದಲ ಎಲೆಕ್ಟ್ರಿಕ್ ಲೋಕಲ್ ರೈಲು ಮುಂಬೈನ ವಿಕ್ಟೋರಿಯಾ ಟರ್ಮಿನಸ್‌ನಿಂದ (ಈಗಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್) ಮೊದಲು 16 ಕಿಮೀ ಉದ್ದದ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಇದು ರೈಲು ಸಾರಿಗೆಯಲ್ಲಿ ಹೊಸ ಯುಗ ಪ್ರಾರಂಭಿಸಿತು. ಆ ಸಮಯದಲ್ಲಿ, 1.5 ಕೆವಿಡಿಸಿ ಓವರ್ ಹೆಡ್ ತಂತಿ ವ್ಯವಸ್ಥೆಯನ್ನು ಬಳಕೆ ಮಾಡಿ, ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ರೈಲು ಸಂಚರಿಸಿತ್ತು. ಬ್ರಿಟಿಷರ ಕಾಲದ ಲೋಕಲ್ ಟ್ರೈನ್ ನಾಲ್ಕು ಬೋಗಿಗಳನ್ನು ಹೊಂದಿತ್ತು. ಈ ಬೋಗಿಗಳನ್ನು ಮರ ಮತ್ತು ಕಬ್ಬಿಣದ ಮಿಶ್ರಣದಿಂದ ಮಾಡಲಾಗಿತ್ತು.
ಘಾಟ್ ಗಳನ್ನು ಏರಲು ಏದುಸಿರು ಬಿಡುತ್ತಿದ್ದ ಸ್ಟೀಮ್ ಇಂಜಿನ್‌ಗಳು: ಸ್ಟೀಮ್ ಇಂಜಿನ್‌ಗಳು ಪುಣೆ ಮತ್ತು ನಾಸಿಕ್‌ನ ಘಾಟ್‌ಗಳನ್ನು ಹತ್ತಲು ಕಷ್ಟಪಡುತ್ತಿದ್ದವು. ಈ ಹಿನ್ನೆಲೆಯಲ್ಲಿ 1920 ರಲ್ಲಿ, ಪುಣೆ, ಇಗತ್ಪುರಿ ಮತ್ತು ವಸಾಯಿ ಮಾರ್ಗಗಳ ವಿದ್ಯುದ್ದೀಕರಣ ಮಾಡಲು ಆಗಿನ ಬ್ರಿಟಿಷ್ ಸರ್ಕಾರ ಅನುಮೋದನೆ ನೀಡಿತ್ತು. ಬ್ರಾಡ್ ಗೇಜ್ ನೆಟ್‌ವರ್ಕ್‌ನ ಶೇ 100ರಷ್ಟು ವಿದ್ಯುದೀಕರಣ ಪೂರ್ಣಗೊಂಡಿತ್ತು. ಅಧಿಕೃತ ರೈಲ್ವೆ ದಾಖಲೆಗಳ ಪ್ರಕಾರ, 1950 ರ ನಂತರ, ಭಾರತವು ರೈಲ್ವೆಗಳ ವಿದ್ಯುದೀಕರಣದ ವೇಗವನ್ನು ಹೆಚ್ಚಿಸಿತ್ತು. ಸ್ಟೀಮ್ ಲೋಕೋಮೋಟಿವ್‌ಗಳನ್ನು ಡೀಸೆಲ್ ಮತ್ತು ಎಲೆಕ್ಟ್ರಿಕ್ ಇಂಜಿನ್‌ಗಳಿಂದ ಬದಲಾವಣೆ ಮಾಡಿ, ರೈಲ್ವೆಯ ದಕ್ಷತೆಯನ್ನು ಹೆಚ್ಚಿಸಲಾಯಿತು. ಸಾಂಪ್ರದಾಯಿಕ ಉಗಿ ಇಂಜಿನ್‌ಗಳು ಮತ್ತು ಮಾಲಿನ್ಯದ ಸಮಸ್ಯೆ ನಿವಾರಣೆ ಭಾರತೀಯ ರೈಲ್ವೆ ನಡೆಸಿದ ವಿದ್ಯುದ್ದೀಕರಣವು ರೈಲ್ವೆಯ ದಕ್ಷತೆ ಮತ್ತು ವೇಗವನ್ನು ಹೆಚ್ಚಿಸಿತು.
1927 ರಲ್ಲಿ ಎಂಟು ಬೋಗಿಗಳ ಸ್ಥಳೀಯ ರೈಲು ಪ್ರಾರಂಭವಾಯಿತು. 1961 ರಲ್ಲಿ ಒಂಬತ್ತು ಬೋಗಿಗಳ ಲೋಕಲ್ ರೈಲು ಸೇವೆಯನ್ನು ಆರಂಭಿಸಲಾಯಿತು. 1986 ರಲ್ಲಿ ಹನ್ನೆರಡು ತರಬೇತುದಾರರ ಸ್ಥಳೀಯ ಸೇವೆಯನ್ನು ಪ್ರಾರಂಭಿಸಲಾಯಿತು. ಬಳಿಕ ಸೆಂಟ್ರಲ್ ರೈಲ್ವೆಯ ಸಂಪೂರ್ಣ ಬ್ರಾಡ್ ಗೇಜ್ ಜಾಲದ 100 ಪ್ರತಿಶತ ವಿದ್ಯುದೀಕರಣವು 23 ಫೆಬ್ರವರಿ 2023 ರಂದು ಪೂರ್ಣಗೊಂಡಿತು.
1879ರಲ್ಲೇ ಜರ್ಮನಿಯಲ್ಲಿ ರೈಲು ಮಾರ್ಗದ ವಿದ್ಯುದೀಕರಣ: 20ನೇ ಶತಮಾನದಲ್ಲಿ ಮುಂಬೈ ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದಂತೆ, ದೇಶದೆಲ್ಲೆಡೆ ಜನರು ಇಲ್ಲಿಗೆ ಬರಲು ಆರಂಭಿಸಿದ ಕಾರಣ ಮುಂಬೈನಲ್ಲಿ ವೇಗ ಮತ್ತು ಪರಿಣಾಮಕಾರಿ ಪ್ರಯಾಣದ ಉಗಮ ಆಯಿತು. ಇದಕ್ಕಾಗಿ ಬ್ರಿಟಿಷ್ ಸರ್ಕಾರವು ಎಲೆಕ್ಟ್ರಿಕ್ ರೇಸ್ ರೈಲುಮಾರ್ಗವನ್ನು ಪ್ರಸ್ತಾಪಿಸಿತು. ಎಲೆಕ್ಟ್ರಿಕ್ ರೈಲುಮಾರ್ಗಗಳನ್ನು ಮೊದಲು ಜರ್ಮನಿಯಲ್ಲಿ ಆರಂಭವಾದವು. ಅಲ್ಲಿ 1879 ರಲ್ಲಿ ಮೊದಲ ವಿದ್ಯುತ್ ರೈಲುಮಾರ್ಗವನ್ನು ಪ್ರಾರಂಭಿಸಿತು. ಇದಾದ 46 ವರ್ಷಗಳ ಬಳಿಕ ಭಾರತದಲ್ಲಿ ಎಲೆಕ್ಟ್ರಿಕ್ ರೈಲು ಆರಂಭವಾಯಿತು. ಭಾರತ ವಿಶ್ವದ 24ನೇ ಮತ್ತು ಏಷ್ಯಾದ ಮೂರನೇ ವಿದ್ಯುದ್ದೀಕರಣ ರೈಲು ವ್ಯವಸ್ಥೆ ಹೊಂದಿತು. ಮುಂಬೈ ಬಳಿಕ ಭಾರತದ ದಕ್ಷಿಣ ಮತ್ತು ಪೂರ್ವದಲ್ಲಿ ಕೂಡ ಈ ಎಲೆಕ್ಟ್ರಿಕಲ್ ರೈಲು ಪ್ರಾರಂಭವಾಯಿತು.
1931ರಲ್ಲಿ ವಿದ್ಯುದೀಕರಣಗೊಂಡಿದ್ದ ಚೆನ್ನೈ - ತಾಂಬರಂ ಮಾರ್ಗ: 1931 ರಲ್ಲಿ, ದಕ್ಷಿಣ ಭಾರತದ ಮದ್ರಾಸ್, ಈಗ ಚೆನ್ನೈ - ತಾಂಬರಂ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿತ್ತು . 1947 ರಲ್ಲಿ ದೇಶವು ಸ್ವತಂತ್ರವಾದ ನಂತರ, ದೇಶದಾದ್ಯಂತ 388 ಕಿಲೋಮೀಟರ್ ರೈಲು ಮಾರ್ಗಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಲಾಯಿತು. ಬಳಿಕ 1950 ರಲ್ಲಿ ಕೋಲ್ಕತ್ತಾದಲ್ಲಿ ವಿದ್ಯುದ್ದೀಕರಣವು ವೇಗವನ್ನು ಪಡೆಯಿತು. 1957 ರ ಡಿಸೆಂಬರ್ನಲ್ಲಿ ಪೂರ್ವ ಭಾರತದಲ್ಲಿ ಮೊದಲ ವಿದ್ಯುತ್ ರೈಲು ಮಾರ್ಗವನ್ನು ಹೌರಾ ಮತ್ತು ಶೆಯೋರಾಫುಲಿ ನಡುವೆ ಆಯಿತು.
ವಿದ್ಯುದ್ದೀಕರಣವು ಭಾರತೀಯ ರೈಲ್ವೆಗೆ ಅನೇಕ ಲಾಭಗಳನ್ನು ತಂದುಕೊಟ್ಟಿತ್ತು. ಡೀಸೆಲ್ ಎಂಜಿನ್‌ಗಳಿಗಿಂತ ಎಲೆಕ್ಟ್ರಿಕ್ ಇಂಜಿನ್‌ಗಳು ಕಡಿಮೆ ಮಾಲಿನ್ಯಕಾರಕವಾಗಿವೆ. ವಿದ್ಯುತ್ ಬಳಕೆ ಶೇ.30ರಷ್ಟು ಹೆಚ್ಚು ಮಿತವ್ಯಯವಾಗಿತು. ಇದು ರೈಲಿನ ವೇಗ ಮತ್ತು ನಿರಂತರ ಚಾಲನೆಯ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಿತ್ತು.
2026ರ ವೇಳೆಗೆ ದೇಶದ ಸಂಪೂರ್ಣ ರೈಲು ಮಾರ್ಗವನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸಲು ನಿರ್ಧರಿಸಲಾಗಿದೆ ಇದರೊಂದಿಗೆ ಭಾರತೀಯ ರೈಲ್ವೇ ಹಸಿರು ಇಂಧನ ಮತ್ತು ನವೀಕರಿಸಬಹುದಾದ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುಲಿದ್ದು, ಸೌರ ಮತ್ತು ಪವನ ಶಕ್ತಿಯ ಬಳಕೆಯನ್ನು ಹೆಚ್ಚಿಸುವ ಮೂಲಕ ವಂದೇ ಭಾರತ್ ಮತ್ತು ಬುಲೆಟ್ ಟ್ರೈನ್‌ನಂತಹ ಹೈಸ್ಪೀಡ್ ರೈಲುಗಳಿಗೆ ಕ್ಲೀನ್ ಎನರ್ಜಿ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೇ, ರೈಲ್ವೆ ನಿಲ್ದಾಣಗಳಲ್ಲಿ ಸೌರಶಕ್ತಿ ಸೌಲಭ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆಯಿಂದ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಮೂರನೇ ಅಮೃತ ಸ್ನಾನಕ್ಕೆ ಸಾಕ್ಷಿಯಾದ ಮಹಾಕುಂಭಮೇಳ: ವಸಂತ ಪಂಚಮಿಗೆ UP ಸರ್ಕಾರದಿಂದ ಮತ್ತಷ್ಟು ಭದ್ರತೆ
ಇದನ್ನೂ ಓದಿ: ನಿಂತುಕೊಂಡೇ ಕುದುರೆಗಳು ನಿದ್ರಿಸುವುದೇಕೆ; ಅಂತಹ ಶಕ್ತಿ ಏನಿದೆ ಅಶ್ವಗಳಲ್ಲಿ? ಕಾರಣ ಏನು ಇಲ್ಲಿ ತಿಳಿಯಿರಿ!