ನವದೆಹಲಿ:ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದವರ ಹೆಸರುಗಳು ಬಹಿರಂಗವಾಗಿವೆ. ಇದರಲ್ಲಿ ಹಲವು ಮಹತ್ವದ ವಿಷಯಗಳು ಈಗ ಸಾರ್ವಜನಿಕಗೊಂಡಿವೆ. ರಾಜಕೀಯ ಪಕ್ಷಗಳಿಗೆ2019 ಹಾಗೂ 2024ರ ನಡುವೆ ₹1,368 ಕೋಟಿ ರೂಪಾಯಿಯನ್ನು ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ, ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ದೇಣಿಗೆ ನೀಡಿದ್ದಾರೆ ಎಂದು ಚುನಾವಣಾ ಆಯೋಗವು ಬಹಿರಂಗಪಡಿಸಿದೆ.
ಸುಪ್ರೀಂ ಕೋರ್ಟ್ ಚಾಟಿ ಏಟಿನ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್ಗಳ ಮಾಹಿತಿ ನೀಡಿತ್ತು. ಕೆಲವು ದಿನಗಳ ಬಳಿಕ ಗುರುವಾರ ಚುನಾವಣಾ ಆಯೋಗವು, ಬಾಂಡ್‌ಗಳನ್ನು ಖರೀದಿಸಿದವರ ಪಟ್ಟಿಯನ್ನು ಪ್ರಕಟ ಮಾಡಿತ್ತು. ಈ ಪಟ್ಟಿಯಲ್ಲಿ 'ಲಾಟರಿ ಕಿಂಗ್' ಎಂದು ಕರೆಯಲ್ಪಡುವ ಸ್ಯಾಂಟಿಯಾಗೊ ಮಾರ್ಟಿನ್ ಹೆಸರನ್ನು ಬಹಿರಂಗಪಡಿಸಲಾಗಿದೆ.
ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು 2019ರಿಂದ 2024ರವರೆಗೆ ಅತ್ಯಧಿಕ ಮೌಲ್ಯದ 1,368 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿರುವುದು ಎಂದು ಕಂಡು ಬಂದಿದೆ. ಇದರೊಂದಿಗೆ ಆ ಕಂಪನಿಯ ಮಾಲೀಕ ಲಾಟರಿ ದೊರೆ ಸ್ಯಾಂಟಿಯಾಗೊ ಮಾರ್ಟಿನ್ ಹೆಸರು ಚರ್ಚೆಗೆ ಗ್ರಾಸವಾಗಿದೆ. ಕಾರ್ಮಿಕನಾಗಿ ಜೀವನ ಆರಂಭಿಸಿದ ವ್ಯಕ್ತಿಯೊಬ್ಬ ಭಾರತದ ರಾಜಕೀಯ ಪಕ್ಷಗಳ ಅತಿದೊಡ್ಡ ದೇಣಿಗೆ ನೀಡುವಷ್ಟರ ಮಟ್ಟಿಗೆ ಬೆಳೆದಿರುವುದು ಗಮನಾರ್ಹ ಸಂಗತಿ.
ಕಾರ್ಮಿಕನಾಗಿದ್ದ ಸ್ಯಾಂಟಿಯಾಗೊ ಮಾರ್ಟಿನ್: ಅವರದೇ ಕಂಪನಿಯ ವೆಬ್‌ಸೈಟ್, ಮಾರ್ಟಿನ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ವಿವರಗಳನ್ನು ನೀಡುತ್ತದೆ. ಆರಂಭದ ದಿನಗಳಲ್ಲಿ ಮ್ಯಾನ್ಮಾರ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. 1988ರಲ್ಲಿ ಭಾರತಕ್ಕೆ ಹಿಂತಿರುಗಿ ತಮಿಳುನಾಡಿನಲ್ಲಿ ಲಾಟರಿ ವ್ಯವಹಾರ ಪ್ರಾರಂಭಿಸಿದರು. ಇದನ್ನು ಕರ್ನಾಟಕ ಮತ್ತು ಕೇರಳಕ್ಕೂ ವಿಸ್ತರಣೆ ಮಾಡಲಾಗಿತ್ತು. ನಂತರ ಅವರು ಈಶಾನ್ಯ ಭಾರತಕ್ಕೆ ಸ್ಥಳಾಂತರಗೊಂಡರು. ಅಲ್ಲಿ ಅವರು ಸರ್ಕಾರದ ಲಾಟರಿ ಯೋಜನೆಗಳೊಂದಿಗೆ ವ್ಯವಹಾರ ಪ್ರಾರಂಭಿಸಿದರು. ಕೆಲವೇ ವರ್ಷಗಳಲ್ಲಿ, ಅವರು ಭೂತಾನ್ ಮತ್ತು ನೇಪಾಳದಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿದರು. ರಿಯಲ್ ಎಸ್ಟೇಟ್, ನಿರ್ಮಾಣ, ಜವಳಿ ಮತ್ತು ಆತಿಥ್ಯ ಕ್ಷೇತ್ರಗಳನ್ನು ಪ್ರವೇಶ ಮಾಡಿದ್ದಾರೆ.