ಚಂಡೀಗಢ (ಪಂಜಾಬ್):ನಾಲ್ಕನೇ ಸುತ್ತಿನ ಮಾತುಕತೆಯ ನಂತರ, ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಣ್ ಸಿಂಗ್ ಪಂಧೇರ್ ಪ್ರತಿಕ್ರಿಯೆ ನೀಡಿದ್ದಾರೆ. ರೈತರಿಂದ ಫೆಬ್ರವರಿ 21 ರಂದು 'ದೆಹಲಿ ಚಲೋ' ಮೆರವಣಿಗೆಯೊಂದಿಗೆ ಮುಂದುವರಿಯಲಿದೆ. ಜೊತೆಗೆ ಎಂಎಸ್‌ಪಿ ಕುರಿತು ಸರ್ಕಾರ ಪ್ರಸ್ತಾಪಿಸಿರುವ ಪ್ರಸ್ತಾವನೆ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
''ಸರ್ಕಾರದ ಪ್ರಸ್ತಾವನೆ ಕುರಿತು ಇನ್ನೆರಡು ದಿನಗಳಲ್ಲಿ ಚರ್ಚೆ ನಡೆಸುತ್ತೇವೆ. ಇತರ ಬೇಡಿಕೆಗಳ ಬಗ್ಗೆಯೂ ಸರ್ಕಾರ ಚರ್ಚೆ ನಡೆಸಲಿದೆ. ಫಲಿತಾಂಶ ಬಾರದಿದ್ದಲ್ಲಿ ಫೆ.21ರಂದು ‘ದೆಹಲಿ ಚಲೋ’ ಮೆರವಣಿಗೆಯನ್ನು ಮುಂದುವರಿಸುತ್ತೇವೆ'' ಎಂದು ಚಂಡೀಗಢದಲ್ಲಿ ಸೋಮವಾರ ಪ್ರತಿಭಟನಾ ನಿರತ ರೈತ ಸಂಘಗಳು ಮತ್ತು ಕೇಂದ್ರ ಸಚಿವರ ನಡುವಿನ ಸಭೆಯ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಪಂಧೇರ್ ಮಾತನಾಡಿದರು.
''ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮತ್ತು ರೈತ ಸಂಘಗಳು ಪ್ರಯತ್ನಿಸಲಿವೆ. ನಾವು ಸರ್ಕಾರದ ಪ್ರಸ್ತಾವನೆಯ ಬಗ್ಗೆ ಚರ್ಚೆ ನಡೆಸುತ್ತೇವೆ. ಅದರ ಬಗ್ಗೆ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತೇವೆ. ಇಂದು ಬೆಳಗ್ಗೆ ಅಥವಾ ಸಂಜೆಯೊಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ದೆಹಲಿಗೆ ಮರಳಿದ ನಂತರ ಇತರೆ ಬೇಡಿಕೆಗಳ ಕುರಿತು ಚರ್ಚೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ. ಫೆ.19-20ರಂದು ಚರ್ಚೆ ನಡೆಯಲಿದ್ದು, ಫೆ.21ಕ್ಕೆ ನಿಗದಿಯಾಗಿರುವ ‘ದೆಹಲಿ ಚಲೋ’ ಮೆರವಣಿಗೆ ನಡೆಯಲಿದೆ. ಚರ್ಚೆಗಳ ಆಧಾರದ ಮೇಲೆ ಸರ್ಕಾರ ಮತ್ತು ರೈತ ಸಂಘ ಒಟ್ಟಾಗಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ'' ಎಂದರು.
ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಪ್ರತಿಕ್ರಿಯೆ:''ಸರ್ಕಾರವು ನಮಗೆ ಪ್ರಸ್ತಾವನೆಯನ್ನು ನೀಡಿದೆ, ಅದನ್ನು ಎರಡು ಸರ್ಕಾರಿ ಏಜೆನ್ಸಿಗಳು ಮೇಲ್ವಿಚಾರಣೆ ಮಾಡುತ್ತವೆ ಎಂದು ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಹೇಳಿದರು. "ನಾವು ನಮ್ಮ ವೇದಿಕೆಗಳು ಮತ್ತು ತಜ್ಞರೊಂದಿಗೆ ಸರ್ಕಾರದ (ಎಂಎಸ್‌ಪಿ) ಪ್ರಸ್ತಾವನೆಯನ್ನು ಚರ್ಚಿಸುತ್ತೇವೆ. ನಂತರ, ನಾವು ಒಂದು ತೀರ್ಮಾನಕ್ಕೆ ಬರುತ್ತೇವೆ. ಬೇಡಿಕೆಗಳು ಈಡೇರುವವರೆಗೂ ನಮ್ಮ ಪ್ರತಿಭಟನಾ ಮೆರವಣಿಗೆ (ದೆಹಲಿ ಚಲೋ) ಮುಂದುವರಿಯುತ್ತದೆ. ಇನ್ನೂ ಹಲವು ಬೇಡಿಕೆಗಳ ಕುರಿತು ಮಾತುಕತೆ ನಡೆಸಬೇಕಿದೆ. ಸರ್ಕಾರದೊಂದಿಗಿನ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ನಾವು ನಮ್ಮ (ರೈತರ) ಬೇಡಿಕೆಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇವೆ'' ಎಂದು ದಲ್ಲೆವಾಲ್ ತಿಳಿಸಿದರು.