ಮಥುರಾ (ಉತ್ತರಪ್ರದೇಶ) : ಭಕ್ತರು ನೀಡುವ ಕಾಣಿಕೆ ಲಕ್ಷಾಂತರ ರೂಪಾಯಿ ಹಣ ಮತ್ತು ರಶೀದಿ ಪುಸ್ತಕದ ಸಮೇತ ಇಲ್ಲಿನ ಇಸ್ಕಾನ್ ಟೆಂಪಲ್ನ ಸಿಬ್ಬಂದಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಇದರ ವಿರುದ್ಧ ದೇವಾಲಯದ ಅಧಿಕಾರಿಗಳು ನೀಡಿದ ದೂರಿನನ್ವಯ ಆರೋಪಿ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ನಿಮಾಯ್ ಚಂದ್ ಯಾದವ್ ಅವರ ಪುತ್ರ ಮುರಳೀಧರ್ ದಾಸ್ ಎಂಬಾತ ಕಾಣಿಕೆ ಹಣವನ್ನು ಕದ್ದು ಪರಾರಿಯಾಗಿರುವ ಆರೋಪಿ. ಈತ ಮಧ್ಯಪ್ರದೇಶದ ಇಂದೋರ್ನ ರೌಗಂಜ್ ನಿವಾಸಿಯಾಗಿದ್ದಾನೆ. ಆರೋಪಿ ಮುರಳೀಧರ್ ದಾಸ್ ಇಲ್ಲಿನ ಇಸ್ಕಾನ್ ದೇವಾಲಯದ ಕಾಣಿಕೆ ಸಂಗ್ರಹ ಉದ್ಯೋಗಿಯಾಗಿ ನಿಯೋಜನೆಯಾಗಿದ್ದರು.
ಶುಕ್ರವಾರ ತಡರಾತ್ರಿ ದೇವಸ್ಥಾನದಲ್ಲಿ ಹಣ ಮತ್ತು ರಶೀದಿ ಕಾಣೆಯಾಗಿದ್ದರ ಬಗ್ಗೆ ಮುಖ್ಯ ಹಣಕಾಸು ಅಧಿಕಾರಿ ವಿಶ್ವನಾಮ ದಾಸ್ ಅವರು ದೂರು ನೀಡಿದ್ದಾರೆ. ಇದರ ಪ್ರಕಾರ, ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅರವಿಂದ್ ಕುಮಾರ್ ತಿಳಿಸಿದ್ದಾರೆ.
32 ಹಾಳೆಗಳ ರಶೀದಿ ಕಳವು: ಆರೋಪಿ ಮುರಳೀಧರ್ ದಾಸ್, ದೇವಸ್ಥಾನಕ್ಕೆ ಭಕ್ತರು ನೀಡಿದ್ದ ದೊಡ್ಡ ಮೊತ್ತ ಮತ್ತು ಅವರ ರಶೀದಿಯನ್ನು ಕದ್ದಿದ್ದಾನೆ. 32 ಹಾಳೆಗಳಿದ್ದ ರಶೀದಿ ನಾಪತ್ತೆಯಾಗಿದೆ. ಆತನೇ ಭಕ್ತರಿಂದ ಹಣ ಸಂಗ್ರಹಣೆ ಮಾಡಿ, ದೇವಾಲಯದ ಅಧಿಕಾರಿಗಳಿಗೆ ಕಾಲಕಾಲಕ್ಕೆ ಜಮಾ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಾಲಯದಲ್ಲಿ ಹಣ ಕಳ್ಳತನವಾದ ಬಗ್ಗೆ ಡಿಸೆಂಬರ್ 27 ರಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇದೀಗ ಎಫ್ಐಆರ್ ದಾಖಲಿಸಲಾಗಿದೆ. ರಶೀದಿ ಕಳ್ಳತನವಾದ ಕಾರಣ, ಯಾವ ಭಕ್ತರಿಂದ ಎಷ್ಟು ಹಣ ಸಂಗ್ರಹವಾಗಿದೆ ಎಂಬುದು ತಿಳಿದುಬಂದಿಲ್ಲ. ತನಿಖೆಯ ನಂತರ ಕಳ್ಳತನವಾದ ಹಣದ ಮೊತ್ತ ಪತ್ತೆಯಾಗಲಿದೆ ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ.
ಎರಡನೇ ಘಟನೆ: ಮಥುರಾ ಇಸ್ಕಾನ್ ಟೆಂಪಲ್ನಲ್ಲಿ ಹಣ ಕಳ್ಳತನ ಘಟನೆಯು ಇದೇ ಮೊದಲಲ್ಲ. ಈ ಹಿಂದೆಯೂ ಸೌರವ್ ಎಂಬಾತ ದೇಣಿಗೆ ಹಣ ಹಾಗೂ ರಸೀದಿ ಪುಸ್ತಕದೊಂದಿಗೆ ಪರಾರಿಯಾಗಿದ್ದ. ಆರೋಪಿಯನ್ನು ಹಿಡಿಯುವ ಮೊದಲೇ ಆತ ಮೃತಪಟ್ಟಿದ್ದ. ಇದೀಗ ಕಳ್ಳತನ ಪ್ರಕರಣ ಮರುಕಳಿಸಿದೆ.
ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ; ಭದ್ರತೆ ಉಲ್ಲಂಘಿಸಿದ ಆರೋಪಿ ಪತ್ತೆಗೆ ತಲಾಶ್