ಕರ್ನಾಟಕ

karnataka

ETV Bharat / bharat

'ನಮಗೂ ಖುಷಿ..': ಇಂಡಿಯಾ ಬ್ಲಾಕ್ ನೇತೃತ್ವದ ವಿಚಾರದಲ್ಲಿ ದೀದಿ ಬೆಂಬಲಕ್ಕೆ ನಿಂತ ಎನ್​ಸಿಪಿ (ಎಸ್​ಪಿ) - INDIA ALLIANCE

ಇಂಡಿಯಾ ಬ್ಲಾಕ್ ನೇತೃತ್ವದ ಬಗ್ಗೆ ಸಿಎಂ ಮಮತಾ ಹೇಳಿಕೆಗೆ ಸುಪ್ರಿಯಾ ಸುಳೆ ಪ್ರತಿಕ್ರಿಯೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ (IANS)

By ETV Bharat Karnataka Team

Published : Dec 8, 2024, 1:39 PM IST

ಪುಣೆ: ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಲು ತಾನು ಸಿದ್ಧ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎನ್​ಸಿಪಿ (ಎಸ್​ಪಿ) ಸಂಸದೆ ಸುಪ್ರಿಯಾ ಸುಳೆ, "ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಹೆಚ್ಚಿನ ಜವಾಬ್ದಾರಿ ಹೊರುವುದಾದರೆ ಅದು ನಮಗೆ ಖುಷಿಯ ವಿಚಾರವೇ ಆಗಿದೆ" ಎಂದಿದ್ದಾರೆ.

ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಸುಳೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಡಿಯಾ ಬ್ಲಾಕ್​ನ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಹೇಳಿದರು.

"ಮಮತಾ ಬ್ಯಾನರ್ಜಿ ಖಂಡಿತವಾಗಿಯೂ ಎನ್​ಡಿಎ ಮೈತ್ರಿಕೂಟದ ಅವಿಭಾಜ್ಯ ಅಂಗವಾಗಿದ್ದಾರೆ. ಸಕ್ರಿಯ ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಪಾತ್ರ ಬಹಳ ದೊಡ್ಡದಾಗಿದ್ದು, ಅಷ್ಟೇ ದೊಡ್ಡ ಜವಾಬ್ದಾರಿಯೂ ಇದೆ. ಹೀಗಾಗಿ ಅವರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಬಯಸಿದರೆ ಅದು ನಮಗೆ ಸಂತೋಷದ ವಿಚಾರವಾಗಿದೆ" ಎಂದು ಅವರು ಎಎನ್ಐಗೆ ತಿಳಿಸಿದರು.

ಇದಕ್ಕೂ ಮುನ್ನ ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ.

"ಮಮತಾ ಬ್ಯಾನರ್ಜಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಲ್ಲಿ ಅವರು ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿದ್ದು, ಉತ್ತಮ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಚುನಾವಣಾ ಅನುಭವ ಮತ್ತು ಹೋರಾಟದ ಮನೋಭಾವಗಳನ್ನು ಆಧರಿಸಿ ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇಂಡಿಯಾ ಬ್ಲಾಕ್​ನ ಸಭೆಗಳಲ್ಲಿ ನಮ್ಮ ಹಿರಿಯ ನಾಯಕರು ಒಟ್ಟಾಗಿಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಚತುರ್ವೇದಿ ಹೇಳಿದರು.

ಟಿಎಂಸಿ ಸಂಸದ ಕೀರ್ತಿ ಆಜಾದ್ ಕೂಡ ಇಂಡಿಯಾ ಬ್ಲಾಕ್ ಮುನ್ನಡೆಸಲು ತಮ್ಮ ನಾಯಕಿ ಮಮತಾರನ್ನು ಬೆಂಬಲಿಸಿದ್ದಾರೆ. "ಮಮತಾ ಬ್ಯಾನರ್ಜಿ ಶೆಕಡಾ 100 ರಷ್ಟು ಯಶಸ್ಸು ಸಾಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಯಾದರೂ ಅವಮಾನಕರ ಸೋಲು ಕಂಡಿದ್ದಾರೆ ಎಂದರೆ ಅದು ಪಶ್ಚಿಮ ಬಂಗಾಳದಲ್ಲಿ ಮಾತ್ರ. ಅವರು ಬಂಗಾಳ ಮತ್ತು ಅದರ ಗೌರವವನ್ನು ಅವಮಾನಿಸಿದಾಗಲೆಲ್ಲ ಮಮತಾರ ಮತ ಗಳಿಕೆ ಪ್ರಮಾಣ ಹೆಚ್ಚಾಗುತ್ತದೆ" ಎಂದು ಅವರು ಹೇಳಿದರು.

ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಇಂಡಿಯಾ ಬ್ಲಾಕ್ ಬಣವನ್ನು ಮುನ್ನಡೆಸಲು ಪ್ರಬಲ ನಾಯಕನ ಅಗತ್ಯವಿದೆ ಎಂದು ಕಳೆದ ತಿಂಗಳು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸಲಹೆ ನೀಡಿದ್ದರು. ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಮೈತ್ರಿಕೂಟವು ಇನ್ನಷ್ಟು ಬಲಶಾಲಿಯಾಗಬೇಕು ಎಂದು ಅವರು ಹೇಳಿದ್ದರು.

ಇದನ್ನೂ ಓದಿ : INDIA ಕೂಟದ ನಾಯಕತ್ವಕ್ಕಾಗಿ ಟಿಎಂಸಿ - ಕಾಂಗ್ರೆಸ್​ ಜಟಾಪಟಿ: ದೀದಿಗೆ ಎಸ್​​ಪಿ, ಶಿವಸೇನೆ ಬೆಂಬಲ

ABOUT THE AUTHOR

...view details